ದೇಶದ ಅಭಿವೃದ್ಧಿಗೆ ಇಂಜಿನಿಯರ್ಸ್ ಪಾತ್ರ ಬಹುಮುಖ್ಯ ; ವಿಕ್ರಂ ಮೆನನ್

ಬೆಳಗಾವಿ : ರಾಷ್ಟ್ರದ ಭದ್ರತೆ ಹಾಗೂ ಪ್ರಗತಿಗೆ ಇಂಜಿನಿಯರ್ ಪಾತ್ರ ತುಂಬಾ ಮುಖ್ಯ. ನೂತನ ತಂತ್ರಜ್ಞಾನಗಳು ಮನುಷ್ಯನು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತಿರಬೇಕು. ಹವಾಮಾನ ಬದಲಾವಣೆಯನ್ನು ಎದುರಿಸುವುದರಿಂದ ಹಿಡಿದು, ಆರೋಗ್ಯ ಸೇವೆಗಳನ್ನು ಸುಧಾರಿಸುವವರೆಗೂ ತಂತ್ರಜ್ಞಾನದ ಅವಶ್ಯಕತೆ ಇದ ಎಂದು
ಕರ್ನಾಟಕ ನೌಕಾ ನೆಲೆಯ ಫ್ಲಾಗ್ ಆಫೀಸರ್ ಕಮಾಂಡಿಂಗ್ ರಿಯರ್ ಅಡ್ಮಿರಲ್ ವಿಕ್ರಂ ಮೆನನ್ ಹೇಳಿದರು.
ಸೋಮವಾರ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜ್ಞಾನ ಸಂಗಮದಲ್ಲಿ ಜರುಗಿದ ವಾರ್ಷಿಕ ಘಟಿಕೋತ್ಸವ ಭಾಗ 2 ರಲ್ಲಿ ಭಾಗವಹಿಸಿ ಮಾತನಾಡಿದರು.
ನಿಜವಾದ ನಾಯಕತ್ವವು ನವೀನತೆಯಲ್ಲಷ್ಟೇ ಅಲ್ಲ, ನೈತಿಕ ಹೊಣೆಗಾರಿಕೆ, ತಂಡದ ಕೆಲಸ, ವಿದ್ಯಾರ್ಥಿಗಳು ಸ್ವಾರ್ಥ ಬಿಟ್ಟು ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ನೀವು ಇದೀಗ ವೃತ್ತಿ ಜೀವನಕ್ಕೆ ಹೆಜ್ಜೆ ಹಿಡುತ್ತಿದ್ದೀರಿ, ದೊಡ್ಡ ಕನಸುಗಳನ್ನು ಕಾಣಿ. ಧೈರ್ಯವಾಗಿ ಸಮಸ್ಯೆಗಳನ್ನು ಎದುರಿಸಿ ಎಂದು ಸಲಹೆ ನೀಡಿದರು.
ಶಿಕ್ಷಣ, ಸಂಶೋಧನೆ ಮತ್ತು ನವೀನತೆಯಲ್ಲಿ ಸಹಕಾರವನ್ನು ಬಲಪಡಿಸಲು ಉದ್ದೇಶದಿಂದ ವಿಟಿಯು, ನೌಕಾನೆಲೆಯೊಂದಿಗೆ ಒಪ್ಪಂದ ಮಾಡಿಕೊಳ್ಳವುದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಇಂತಹ ಸಹಭಾಗಿತ್ವಗಳು ವಿದ್ಯಾರ್ಥಿಗಳು, ಸಂಶೋಧಕರು ಮತ್ತು ನೌಕಾಪಡೆಯ ಸಿಬ್ಬಂದಿ ಏರೋಸ್ಪೇಸ್, ರಕ್ಷಣಾ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಸಂಕೀರ್ಣ ಸವಾಲುಗಳನ್ನು ಸಂಯುಕ್ತವಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂದರು.
ರಾಜ್ಯಪಾಲರಾದ ಥಾವರ ಚಂದ್ ಗೆಹ್ಲೋಟ್ ಮಾತನಾಡಿ, “ವಿಶ್ವೇಶ್ವರಯ್ಯ ಅವರು ತಮ್ಮ ದೂರದೃಷ್ಟಿ ಇಟ್ಟುಕೊಂಡು ಈ ವಿಶ್ವವಿದ್ಯಾಲಯ ಆರಂಭಿಸಿದ್ದಾರೆ. ತಂತ್ರಜ್ಞಾನಗಳು ಸಾಮಾನ್ಯ ವರ್ಗದ ಜನರ ಸಮಸ್ಯೆಗಳನ್ನು ಬಗೆಹರಿಸುವಂತಿರಬೇಕು. ಕರ್ನಾಟಕ ರಾಜ್ಯವು ಜ್ಞಾನ, ನಾವೀನ್ಯತೆ ಮತ್ತು ಉತ್ತಮ ಆಡಳಿತದ ಕ್ಷೇತ್ರಗಳಲ್ಲಿ ಯಾವಾಗಲೂ ಪ್ರಮುಖ ಪಾತ್ರ ವಹಿಸಿದೆ.
ಪ್ರಸ್ತುತ ರಾಜ್ಯವು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ ವಿಜ್ಞಾನ, ನವೋದ್ಯಮ ಸಂಸ್ಕೃತಿ ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ದೇಶವು ಮುಂಚೂಣಿಯಲ್ಲಿದೆ. ಆತ್ಮವಿಶ್ವಾಸದ ಮತ್ತು “ಅಭಿವೃದ್ಧಿ ಹೊಂದಿದ ಭಾರತ”ವನ್ನು ಸಾಧಿಸುವ ಸಂಕಲ್ಪದೊಂದಿಗೆ ಮುಂದುವರಿಯುತ್ತಿರುವ ಭಾರತ ಮತ್ತು ಕರ್ನಾಟಕವನ್ನು ಯುವಪೀಳಿಗೆ ಪ್ರತಿನಿಧಿಸುತ್ತಾರೆ. ಈ ಗುರಿಯನ್ನು ಸಾಧಿಸುವಲ್ಲಿ ಜ್ಞಾನ, ಕಠಿಣ ಪರಿಶ್ರಮ ಮತ್ತು ನಿಮ್ಮ ಕರ್ತವ್ಯ ಪ್ರಜ್ಞೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಘಟಿಕೋತ್ಸವದಲ್ಲಿ ಒಟ್ಟು 8,702 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಈ ಪೈಕಿ 96 ವಿದ್ಯಾರ್ಥಿಗಳು ರ್ಯಾಂಕ್ ವಿಜೇತರು ಹಾಗೂ 25 ವಿದ್ಯಾರ್ಥಿಗಳು ಚಿನ್ನದ ಪದಕವನ್ನು ಪಡೆದಕೊಂಡರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್, ಕುಲಸಚಿವರಾದ ಪ್ರೊ.ಯು.ಜೆ.ಉಜ್ವಲ್, ಪ್ರೊ.ಪ್ರಸಾದ್ ಬಿ.ರಾಂಪೂರೆ , ವಿಟಿಯು ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು, ಕಾರ್ಯಕಾರಿ ಸಮಿತಿಯ ಸದಸ್ಯರು ಭಾಗವಹಿಸಿದ್ದರು.
*********
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ತಂತ್ರಜ್ಞಾನ ಅಳವಡಿಕೊಳ್ಳುವಲ್ಲಿ ಮುಂದಿದೆ. ಇದಕ್ಕಾಗಿ ಹಲವು ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಂಡಿದೆ. 83 ಸಾವಿರ ವಿದ್ಯಾರ್ಥಿಗಳು ಇಂಟರ್ನ್ ಶಿಪ್ ತೆಗೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಪ್ರಾಜೆಕ್ಟ್ ಗಳ ಪ್ರದರ್ಶನಕ್ಕಾಗಿ ನಾವು ಈ ತಿಂಗಳು ಓಪನ್ ಡೇ ಮಾಡುತ್ತಿದ್ದೇವೆ. ಉತ್ತಮ ಪ್ಲೇಸ್ ಮೆಂಟ್ ಅನ್ನು ವಿಟಿಯು ನೀಡುತ್ತಿದೆ. 4 ಸಾವಿರ ಇಂಡಸ್ಟ್ರಿ ಜತೆಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ. ವಿದ್ಯಾರ್ಥಿಗಳ ಸರ್ವೋತಮುಖ ಬೆಳವಣಿಗೆಗೆ ಪೂರಕವಾದ ವಾತಾವರಣ ಸೃಷ್ಟಿ ಮಾಡುವುದು ನಮ್ಮ ಉದ್ದೇಶವಾಗಿದೆ.
– ಪ್ರೊ.ಎಸ್. ವಿದ್ಯಾಶಂಕರ್,
ಕುಲಪತಿಗಳು, ವಿಟಿಯು ಬೆಳಗಾವಿ
*********
ನಾನು ಚಿನ್ನದ ಪದಕವನ್ನು ನೀರಿಕ್ಷೆ ಮಾಡಿದ್ದೆ. ಏಕೆಂದರೆ, ನಾನು 2023ರಲ್ಲಿ ಪದವಿಯಲ್ಲಿ ವಿಟಿಯು ಚಿನ್ನದ ಪದಕ ಪ್ರದಾನ ಮಾಡಿತ್ತು. ಇದೀಗ ಅದೇ ವಿಟಿಯುನಿಂದ ಎರಡನೇ ಬಾರಿಗೆ ಚಿನ್ನದ ಪದಕ ಪಡೆಯಲು ನಾನು ಉತ್ಸುಕಳಾಗಿದ್ದೇನೆ. ನಾನು ಮೂಲತಃ ಭದ್ರಾವತಿಯವಳು. ತಂದೆ ಕೃಷಿಕರು. ತಾಯಿ ಫಾರ್ಮಸಿ ನಡೆಸುತ್ತಾರೆ. ನನಗೆ ಟಿಸಿಎಸ್ ನಲ್ಲಿ ಉದ್ಯೋಗ ಸಿಕ್ಕಿದೆ. ಪ್ರಮಾಣ ಪತ್ರಕ್ಕಾಗಿ ಕಾಯುತ್ತಿದ್ದೆ. ಇದೀಗ ಸಕ್ಕಿದೆ. ತಕ್ಷಣ ನಾನು ಕೆಲಸಕ್ಕೆ ಸೇರಿಕೊಳ್ಳುತ್ತೇನೆ.
– ಪಾರ್ವತಿ ಸಲೇರಾ, 4 ಚಿನ್ನದ ಪದಕ, ಎಂಬಿಎ, ಜವಹರಲಾಲ್ ನೆಹರು ನ್ಯಾಷನಲ್ ಕಾಲೇಜು, ಶಿವಮೊಗ್ಗ,
************


