ಚಿತ್ರದುರ್ಗ : ಹಬ್ಬದ ದಿನವೇ ಭೀಕರ ರಸ್ತೆ ಅಪಘಾತ (Road Mishap) ಸಂಭವಿಸಿದ್ದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ. ಚಿತ್ರದುರ್ಗ (Chitradurga) ಜಿಲ್ಲೆಯ ಹಿರಿಯೂರು (Hiriyur) ತಾಲೂಕಿನ ಗೊರ್ಲತ್ತು ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದ್ದು, ದುರಂತದಲ್ಲಿ 17 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಹೈದರಾಬಾದ್‌ ಬಸ್‌ ದುರಂತದ ಬಳಿಕ ಚಿತ್ರದುರ್ಗದಲ್ಲಿ ನಡೆದ ಈ ದುರಂತ ಶಾಕಿಂಗ್‌ ಎನಿಸಿದೆ. ಗೊರ್ಲತ್ತು ಗ್ರಾಮದ ಬಳಿ ಸೀಬರ್ಡ್ ಸ್ಟೀಪರ್ ಕೋಚ್ ಬಸ್ ಹಾಗೂ ಲಾರಿ ನಡುವೆ ಡಿಕ್ಕಿಯಾಗಿ ಬೆಂಕಿ ಹೊತ್ತಿ ಉರಿದ ಪರಿಣಾಮ 17 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಬಸ್‌ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿತ್ತು ಎನ್ನಲಾಗಿದೆ. ಖಾಸಗಿ ಬಸ್ ಹಾಗೂ ಲಾರಿ ಡಿಕ್ಕಿ ಸಂಭವಿಸಿ, ಈ ವೇಳೆ ಬಸ್ ನಲ್ಲಿದ್ದ 17 ಕ್ಕೂ ಹೆಚ್ಚು ಜನರು ಸಜೀವ ದಹನವಾಗಿದ್ದಾರೆ. ಹಲವರು ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಅಪಘಾತ ನಡೆದಿದ್ದು ಹೇಗೆ?
ವರದಿಗಳ ಪ್ರಕಾರ ಬಸ್ ಅತಿವೇಗದಿಂದ ಕಂಟೈನರ್ ಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಬೆಂಕಿ ಹತ್ತಿಕೊಂಡಿದೆ. ಬೆಂಕಿ ತಕ್ಷಣವೇ ಬಸ್‌ಗೆ ಆವರಿಸಿದ್ದು, ನಿದ್ರೆಯ ಮಂಪರಿನಲ್ಲಿದ್ದ ಪ್ರಯಾಣಿಕರು ಸುಟ್ಟು ಕರಕಲಾಗಿದ್ದಾರೆ. ಒಂದಷ್ಟು ಪ್ರಯಾಣಿಕರನ್ನು ಬಸ್‌ನಿಂದ ಇಳಿದರೂ ಕೂಡಾ 17ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಿರುವ ಕಾರಣ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನು ಅಪಘಾತಕ್ಕೊಳಗಾದ ಬಸ್‌ ‘ಸೀ ಬರ್ಡ್’ ಬಸ್ ನಂಬರ್ KA-01 AE-5217 ಎಂದು ತಿಳಿದು ಬಂದಿದೆ. ಡಿಸೆಂಬರ್‌ 24 ರಂದು ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಬಸ್‌ನಲ್ಲಿ ಒಟ್ಟು 29 ಜನರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. 3 ಜನ ಬಸ್ ಸಿಬ್ಬಂದಿ ಕೂಡ ಅದೇ ಬಸ್‌ನಲ್ಲಿದ್ದರು. ಸೀ ಬರ್ಡ್ ಟ್ರಾವೆಲ್ಸ್‌ನ ಚಾರ್ಟ್ ಪ್ರಕಾರ ಆ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದವರ ಹೆಸರುಗಳು ಈ ಕೆಳಗಿನಂತಿವೆ.

ಬಸ್‌ ಬೆಂಗಳೂರಿನ ಗಾಂಧಿನಗರದಲ್ಲಿರುವ ಸೀ ಬರ್ಡ್ ಲಾಂಜ್‌ನಿಂದ ರಾತ್ರಿ 8:25ಕ್ಕೆ ಹೊರಟಿದೆ. ಇಲ್ಲಿ ಒಟ್ಟು 7 ಜನ ಬಸ್ ಹತ್ತಿದ್ದಾರೆ. ಅವರ ಹೆಸರುಗಳು: ಮಂಜುನಾಥ್, ಸಂಧ್ಯಾ ಎಚ್, ಶಶಾಂಕ್ ಎಚ್ ವಿ, ದಿಲೀಪ್, ಪ್ರತೀಶ್ವರನ್, ಬಿಂದು ವಿ ಮತ್ತು ಕವಿತಾ ಕೆ. ನಂತರ ಆನಂದರಾವ್ ಸರ್ಕಲ್‌ನಲ್ಲಿ ಮೂರು ಜನ ಬಸ್ ಹತ್ತಿದ್ದಾರೆ. ಅವರೆಂದರೆ ಅನಿರುದ್ಧ್ ಬ್ಯಾನರ್ಜಿ, ಅಮೃತಾ ಮತ್ತು ಇಶಾ.

ನಂತರ ಮೆಜೆಸ್ಟಿಕ್‌ನಲ್ಲಿ ಅತಿ ಹೆಚ್ಚು ಎಂದರೆ 13 ಜನರು ಬಸ್‌ ಹತ್ತಿದ್ದಾರೆ. ಅವರೆಂದರೆ, ಸೂರಜ್, ಮಾನಸ, ಮಿಲನ, ಹೇಮರಾಜ್ ಕುಮಾರ್, ಕಲ್ಪನಾ ಪ್ರಜಾಪತಿ, ಶಶಿಕಾಂತ್ ಎಂ, ವಿಜಯ್ ಭಂಡಾರಿ, ನವ್ಯ, ಅಭಿಷೇಕ್, ಕಿರಣ್ ಪಾಲ್ ಎಚ್, ಕೀರ್ತನ್ ಎಂ, ನಂದಿತಾ ಜಿ ಬಿ ಮತ್ತು ದೇವಿಕಾ ಎಚ್.

ಯಶವಂತಪುರದ ಗೋವರ್ಧನ್ ಥಿಯೇಟರ್ ಬಳಿ ಮೇಘರಾಜ್, ಮಸ್ರತುನ್ನಿಸಾ ಎಸ್ ಎನ್ ಮತ್ತು ಸೈಯದ್ ಜಮೀರ್ ಗೌಸ್ ಬಸ್ ಹತ್ತಿದ್ದಾರೆ. ಕೊನೆಯದಾಗಿ ಗೊರಗುಂಟೆಪಾಳ್ಯದಲ್ಲಿ ಗಗನಶ್ರೀ ಎಸ್, ರಶ್ಮಿ ಮಹಲೆ ಮತ್ತು ರಕ್ಷಿತಾ ಆರ್ ಬಸ್ ಹತ್ತಿದ್ದಾರೆ‌ ಎಂದು ತಿಳಿದು ಬಂದಿದೆ.

ಈ ಬಸ್‌ನಲ್ಲಿ ಕುಳಿತಿದ್ದ 25 ಜನರು ಗೋಕರ್ಣಕ್ಕೆ ಟಿಕೆಟ್ ಬುಕ್ ಮಾಡಿದ್ದರು. ಇನ್ನುಳಿದವರಲ್ಲಿ ಇಬ್ಬರು ಶಿವಮೊಗ್ಗಕ್ಕೆ ಮತ್ತು ಇಬ್ಬರು ಕುಮಟಾಗೆ ಹೋಗುತ್ತಿದ್ದರು.