ಬೆಳಗಾವಿ : ಚಿನ್ನ ಕದ್ದು ಓಡಿ ಹೋಗುತ್ತಿದ್ದು ಆರೋಪಿಯನ್ನು ಸುಮಾರು ಮೂರು ಕಿ.ಮಿ ವರೆಗೆ ಬೆನ್ನಟ್ಟಿ ಸಿನಿಮೀಯ ರೀತಿಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ರಾಯಬಾಗ ಪೊಲೀಸ್ ಠಾಣೆ ಪೇದೆ ಪರಶುರಾಮ ಗಾಣಿಗೇರ ಯಶಸ್ವಿಯಾಗಿದ್ದಾರೆ.

ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ರೂಪಾ ಖೇತಗೌಡರ್ ಎಂಬುವವರು ಸಪ್ಟೆಂಬರ್ 5 ರಂದು ಸಂಕೇಶ್ವರಕ್ಕೆ ತೆರಳುವ ವೇಳೆ ರಾಯಬಾಗ ಬಸ್ ನಿಲ್ದಾಣದ ಬಳಿ ನಿಂತಿದ್ದಾಗ ಅಪರಿಚಿತ ವ್ಯಕ್ತಿ ಮಹಿಳೆಯ 30 ಗ್ರಾಂ ಚಿನ್ನದ ಸರ ಕದ್ದು ಪರಾರಿಯಾಗಿದ್ದ. ಈ ವೇಳೆ ಕರ್ತವ್ಯನಿರತ ಪೊಲೀಸ್ ಪೇದೆ ಪರಶುರಾಮ ವಿಷಯ ತಿಳಿಯುತ್ತಿದ್ದಂತೆ ಆರೋಪಿಯ ಬೆನ್ನಟ್ಟಿದ್ದ.

ಕಳ್ಳತನ ಮಾಡಿದ್ದ ವ್ಯಕ್ತಿ ಸುಮಾರು ಮೂರು ಕಿ.ಮೀಟರ್ ವರೆಗೆ ಓಡಿದ್ದು ಬೆನ್ನು ಬಿಡದ ಪೊಲೀಸ್ ಪೇದೆ ಆರೋಪಿ ರಾಜು ಪಕಾಲೆ ಎಂಬಾತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೋರ್ವ ಆರೋಪಿ ರಾಹುಲ್‌‌ ಮಾಳಿ ಎಂಬಾತನನ್ನು ಸಾರ್ವಜನಿಕರೇ ಹಿಡಿದು ಚಿನ್ನದ ಸರದ ಜೊತೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕರ್ತವ್ಯನಿರತ ಪೊಲೀಸ್ ಪೇದೆ ಪರಶುರಾಮ ಗಾಣಿಗೇರ ಅವರ ಸಮಯಪ್ರಜ್ಞೆ ಹಾಗೂ ದೈರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೆದ್ ಶ್ಲಾಘಿಸಿದ್ದಾರೆ. ಈ ರೀತಿಯಲ್ಲಿ ಸಾರ್ವಜನಿಕರು ಸಹಕಾರ‌‌ ನೀಡಿದರೆ ಅಪರಾಧ ಕೃತ್ಯಗಳನ್ನು ಕಡಿಮೆ ಮಾಡಬಹುದು, ಜನರು ಪೊಲೀಸರೊಂದಿಗೆ ಸಹಕರಿಸುವಂತೆ ಹೇಳಿದರು.