ಭೋಪಾಲ್:‌ ಯುವತಿಯೊಬ್ಬಳು ತನ್ನ ಪ್ರಿಯಕರನನ್ನು ಮದುವೆಯಾಗುವ ಸಲುವಾಗಿ ಮನೆಯಿಂದ ಓಡಿ ಹೋಗಿದ್ದು, ಆದರೆ ಆಕೆ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿ ಬಂದಂತಹ ವಿಚಿತ್ರ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಈ ಘಟನೆ 2007 ರಲ್ಲಿ ಬಿಡುಗಡೆಯಾದ ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಅಭಿನಯದ ‘ಜಬ್ ವಿ ಮೆಟ್’ ಚಿತ್ರವನ್ನು ನೆನಪಿಸಿದೆ.

ಶ್ರದ್ಧಾ ತಿವಾರಿ ಎಂಬ ಯುವತಿ ತನ್ನ ಪ್ರಿಯಕರ ಸಾರ್ಥಕ್‌ನನ್ನು ಮದುವೆಯಾಗಲು ಮನೆಯಿಂದ ಓಡಿಹೋಗಿದ್ದಳು. ಆದರೆ ಒಂದು ವಾರದ ನಂತರ ಆಕೆ ಇನ್ನೊಬ್ಬ ಪುರುಷನನ್ನು ಮದುವೆಯಾಗಿ ಮನೆಗೆ ಮರಳಿದ್ದಾಳೆ.

ಆಗಸ್ಟ್ 23 ರಂದು ಎಂಐಜಿ ಪೊಲೀಸ್ ಠಾಣೆ ಪ್ರದೇಶದ ನಿವಾಸಿ ಶ್ರದ್ಧಾ ತನ್ನ ಪ್ರಿಯಕರ ಸಾರ್ಥಕ್‌ನನ್ನು ಮದುವೆಯಾಗಲು ಮನೆಯಿಂದ ಹೊರಟುಹೋಗಿದ್ದಳು. ಆದರೆ ಅವಳು ರೈಲ್ವೆ ನಿಲ್ದಾಣವನ್ನು ತಲುಪಿ ತುಂಬಾ ಹೊತ್ತು ಕಾದರೂ ಸಾರ್ಥಕ್ ಬರಲಿಲ್ಲ. ಆತನಿಗೆ ಫೋನ್‌ ಮಾಡಿ ವಿಚಾರಿಸಿದಾಗ, ಆತ ತನಗೆ ಮದುವೆಯಾಗಲು ಇಷ್ಟವಿಲ್ಲ ಎಂದು ಹೇಳಿದ್ದಾನೆ. ಆದರೂ ಶ್ರದ್ಧಾ ವಾಪಸ್‌ ಮನೆಗೆ ಹೋಗದೇ ಯಾವುದೇ ಗುರಿ ಇಲ್ಲದೇ ಸುಮ್ಮನೆ ರೈಲು ಹತ್ತಿ ಪ್ರಯಾಣಿಸಿದ್ದಾಳೆ. ಕೆಲವು ಗಂಟೆಗಳ ಬಳಿಕ ಆಕೆ ‘ಜಬ್ ವಿ ಮೆಟ್’ ಸಿನಿಮಾದಿಂದ ಪ್ರಸಿದ್ಧವಾದ ರತ್ಲಂನಲ್ಲಿ ಇಳಿದಿದ್ದಾಳೆ. ಆಕೆ ತನ್ನ ಭವಿಷ್ಯದ ಬಗ್ಗೆ ತುಂಬಾ ಗೊಂದಲದಲ್ಲೂ ಇದ್ದಳು.

ಅಷ್ಟರಲ್ಲಿ ಶ್ರದ್ಧಾ ಇಂದೋರ್‌ನ ತನ್ನ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಎಲೆಕ್ಟ್ರಿಷಿಯನ್ ಕರಣ್‌ದೀಪ್‌ನನ್ನು ಭೇಟಿಯಾಗಿದ್ದಳೆ. ಶ್ರದ್ಧಾ ಒಬ್ಬಂಟಿಯಾಗಿ ಕುಳಿತಿದ್ದನ್ನು ಕಂಡ ಕರಣ್‌ದೀಪ್ ಅವಳ ಬಳಿಗೆ ಬಂದು ಏನಾಯಿತು ಎಂದು ಕೇಳಿದ್ದಾನೆ. ಅವಳ ಮಾತು ಕೇಳಿದ ನಂತರ ಆತ ಶ್ರದ್ಧಾಗೆ ಮನೆಗೆ ಹಿಂತಿರುಗಿ ಪೋಷಕರಿಗೆ ನಡೆದ ಘಟನೆ ವಿವರಿಸಲು ಸಲಹೆ ನೀಡಿದ್ದಾನೆ. ಆದರೆ ಶ್ರದ್ಧಾ ಅದಕ್ಕೆ ಒಪ್ಪದೇ, ತಾನು ಮದುವೆಯಾಗಲು ಮನೆ ಬಿಟ್ಟಿದ್ದೆ. ಈಗ ನಾನು ಮದುವೆ ಆಗದೇ ಮನೆಗೆ ವಾಪಸ್‌ ಹೋಗಲಾರೆ ಎಂದಿದ್ದಾಳೆ. ಜೊತೆಗೆ ತಾನು ಬದುಕಲು ಸಾಧ್ಯವಿಲ್ಲ ಎಂದಿದ್ದಾಳೆ. ಆದರೂ ಕರಣ್‌ದೀಪ್‌ ಆಕೆಯ ಮನವೊಲಿಸಲು ಪ್ರಯತ್ನಿಸಿದ್ದಾನೆ.

ಯಾವುದೇ ಮಾತಿಗೂ ಶ್ರದ್ಧಾ ಕೇಳದೇ ಹೋಗಿದ್ದಕ್ಕೆ ಕೊನೆಗೆ ಕರಣ್‌ದೀಪ್ ಅವಳಿಗೆ ತನ್ನನ್ನು ಮದುವೆಯಾಗುವಂತೆ ಪ್ರಪೋಸ್‌ ಮಾಡಿದ್ದಾನೆ. ಇದಕ್ಕೆ ಶ್ರದ್ಧಾ ಕೂಡಾ ಒಪ್ಪಿಗೆ ಸೂಚಿಸಿದ್ದಾಳೆ. ನಂತರ ಇಬ್ಬರೂ ಮಹೇಶ್ವರ-ಮಂಡಲೇಶ್ವರಕ್ಕೆ ಪ್ರಯಾಣ ಬೆಳೆಸಿ, ಅಲ್ಲಿ ಮದುವೆಯಾಗಿದ್ದಾರೆ. ನಂತರ ಅಲ್ಲಿಂದ ಅವರು ಮಂದಸೌರ್‌ಗೆ ಹೋಗಿದ್ದಾರೆ.

ಈ ನಡುವೆ ಶ್ರದ್ಧಾಳ ತಂದೆ ಅನಿಲ್ ತಿವಾರಿ ತೀವ್ರ ಹುಡುಕಾಟ ನಡೆಸಿದ್ದಾರೆ. ತನ್ನ ಮಗಳನ್ನು ಹುಡುಕಿಕೊಡುವವರಿಗೆ 51,000 ರೂ.ಗಳ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಗುರುವಾರ, ಶ್ರದ್ಧಾ ಕೊನೆಗೂ ತನ್ನ ತಂದೆಗೆ ಕರೆ ಮಾಡಿ ಮಂದ್ಸೌರ್‌ನಲ್ಲಿ ತಾನು ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದ್ದಾಳೆ. ಸಮಾಧಾನಗೊಂಡ ಆಕೆಯ ತಂದೆ ರಾತ್ರಿ ಹೋಟೆಲ್‌ನಲ್ಲಿ ಉಳಿದು ಮರುದಿನ ಬೆಳಗ್ಗೆ ಮನೆಗೆ ಮರಳುವಂತೆ ಕೇಳಿಕೊಂಡಿದ್ದಾರೆ. ಆದರೆ ಕೆಲವು ಹೋಟೆಲ್‌ಗಳು ತಮಗೆ ರೋಂ ಕೊಡಲು ನಿರಾಕರಿಸುತ್ತಿದ್ದಾರೆ ಎಂದು ತಿಳಿಸಿದಾಗ ಅವರು ರೈಲು ಟಿಕೆಟ್ ಖರೀದಿಸಲು ಕರಣ್‌ದೀಪ್‌ಗೆ ಹಣವನ್ನು ವರ್ಗಾಯಿಸಿದ್ದಾರೆ.

ನಗರಕ್ಕೆ ಹಿಂತಿರುಗಿದ ನಂತರ ಶ್ರದ್ಧಾ ಮತ್ತು ಕರಣ್‌ದೀಪ್ ಎಂಐಜಿ ಪೊಲೀಸ್ ಠಾಣೆಗೆ ಹೋಗಿ, ಅಲ್ಲಿ ಶ್ರದ್ಧಾ ಅವರ ಹೇಳಿಕೆಯನ್ನು ದಾಖಲಿಸಿದ್ದಾರೆ. ಇಂದೋರ್‌ನ ಹೆಚ್ಚುವರಿ ಡಿಸಿಪಿ ರಾಜೇಶ್ ದಂಡೋಟಿಯಾ ಅವರು ಶ್ರದ್ಧಾ ಮತ್ತು ಕರಣ್‌ದೀಪ್ ಇಬ್ಬರನ್ನೂ ವಿಚಾರಣೆ ನಡೆಸಲಾಗುತ್ತಿದೆ ಎಂದು ದೃಢಪಡಿಸಿದ್ದಾರೆ. ಸದ್ಯ ಅನಿಲ್ ತಿವಾರಿ ಅವರು ತಮ್ಮ ಮಗಳನ್ನು ಮರಳಿ ಪಡೆದಿರುವುದರಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಇಬ್ಬರ ಮದುವೆಯನ್ನು ಕುಟುಂಬ ಕೂಡಾ ಒಪ್ಪಿಕೊಂಡಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ.