ಬೆಳಗಾವಿ : ಶಾಲಾ ಮುಖ್ಯ ಶಿಕ್ಷಕ ಮುಸ್ಲಿಂ ಎಂಬ ಕಾರಣಕ್ಕೆ ಆತನನ್ನು ಶಾಲೆಯಿಂದ ಎತ್ತಂಗಡಿ ಮಾಡಿಸುವ ಉದ್ದೇಶದಿಂದ ಶಾಲೆಯ ಆವರಣದಲ್ಲಿದ್ದ ಕುಡಿಯುವ ನೀರಿನ ಟ್ಯಾಂಕ್ ಗೆ ವಿಷ ಸೇರಿಸಿದ ಘಟನೆ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ನಡೆದಿದೆ.

ಹೂಲಿಕಟ್ಟಿ ‌ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 41 ಮಕ್ಕಳು ವ್ಯಾಸಾಂಗ ಮಾಡುತ್ತಿದ್ದು ಮುಖ್ಯ ಶಿಕ್ಷಕ‌ ಸುಲೇಮಾನ್ ಗೋರಿನಾಯಕ್ ಕೆಲಸ ಮಾಡುತ್ತಿದ್ದಾರೆ.

ಇವರನ್ನು ಎತ್ತಂಗಡಿ ‌ಮಾಡಿಸುವ ಉದ್ದೇಶದಿಂದ
ಗ್ರಾಮದ ಸಾಗರ್ ಪಾಟೀಲ್ ಎಂಬಾತ ಕೃಷ್ಣಾ ಮಾದರ್ ಎಂಬುವವನ ಕಡೆಯಿಂದ ಕೀಟನಾಶಕ ಪಡೆದು ಮಕ್ಕಳು ನೀರು ಕುಡಿಯುವ ಟ್ಯಾಂಕ್ ಗೆ ಬೆರೆಸಿದ್ದರು.

ಕಳೆದ ಜುಲೈ 14 ರಂದು ಕೀಟನಾಶಕ ಬೆರೆಸಿದ್ದ ನೀರು ಕುಡಿದು
ಅಸ್ವಸ್ಥರಾಗಿದ್ದ 11 ಮಕ್ಕಳನ್ನು‌ ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.‌ ಸಧ್ಯ ಈ ‌ಪ್ರಕರಣಕ್ಕೆ ಸಂಬಂಧಿಸಿದಂತೆ ನೀರಿಗೆ ಕೀಟನಾಶಕ ‌ಬೆರೆಸಿದ್ದ ಪ್ರಮುಖ ಆರೋಪಿ ಸಾಗರ್ ಪಾಟೀಲ್, ಕೃಷ್ಣಾ ಮಾದರ್, ಹಾಗೂ ನಾಗನಗೌಡ ಪಾಟೀಲ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.‌‌

ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು‌ ಮಾಧ್ಯಮಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ, ಭೀಮಾಶಂಕರ್ ಗುಳೇದ ಮಾಹಿತಿ‌ ನೀಡಿದ್ದಾರೆ.