Select Page

Advertisement

ಕೆಂಪೇಗೌಡರ 516ನೇ ಜಯಂತಿ : ಪ್ರಬಂಧ ಸ್ಪರ್ಧೆಯಲ್ಲಿ ನಕುಶಾ ಪ್ರಥಮ

ಕೆಂಪೇಗೌಡರ 516ನೇ ಜಯಂತಿ : ಪ್ರಬಂಧ ಸ್ಪರ್ಧೆಯಲ್ಲಿ ನಕುಶಾ ಪ್ರಥಮ

ಬೆಳಗಾವಿ : ಬೆಂಗಳೂರು ನಿರ್ಮಾತೃ ‘ನಾಡಪ್ರಭು’ ಕೆಂಪೇಗೌಡರ 516ನೇ ಜಯಂತಿಯ ನಿಮಿತ್ತ ಅಥಣಿ ತಾಲೂಕಾಡಳಿತದ ವತಿಯಿಂದ ಪಟ್ಟಣದಲ್ಲಿಂದು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಸ್ಥಳೀಯ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ನಕುಶಾ ಹಣಮಂತ ಕುಳ್ಳೊಳ್ಳಿ ಪ್ರಥಮ ಸ್ಥಾನ ಪಡೆದಿದ್ದಾಳೆ.

ವೈಜ್ಞಾನಿಕ ದೃಷ್ಟಿಕೋನದಿಂದ ಆಧುನಿಕ ನಗರ ನಿರ್ಮಾಣಕ್ಕೆ ಬುನಾದಿ ಹಾಕಿದ ನಾಡಪ್ರಭು ಶ್ರೀ ಕೆಂಪೇಗೌಡರ ಅಮೋಘ ಕೊಡುಗೆಗಳು ಹಾಗೂ ಅವರ ಜೀವನ ಸಾಧನೆಯ ವಿಷಯಾಧಾರಿತ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಒಟ್ಟು 48 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಲ್ಲರೂ ಉತ್ತಮವಾಗಿ ಪ್ರಬಂಧ ಮಂಡನೆ ಮಾಡಿದ್ದರು.

ಆದರೆ ನಾಡಪ್ರಭು ಕೆಂಪೇಗೌಡರ ಕುರಿತು ಅತ್ಯಂತ ಸರಳವಾಗಿ ಹಾಗೂ ಎಲ್ಲರಿಗೂ ಮನವರಿಕೆಯಾಗುವ ಅಂಶಗಳನ್ನು ಈ ವಿದ್ಯಾರ್ಥಿನಿಯು ಅಕ್ಷರ ರೂಪಕ್ಕಿಳಿಸಿದ್ದಳು. ಪ್ರಮುಖವಾಗಿ ಬೆಂಗಳೂರನ್ನು ನಿರ್ಮಾಣಕ್ಕೆ ಮುಂದಾಗಿ ಅದರಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿದ್ದ ಕೆಂಪೇಗೌಡರು ನಡೆದು ಬಂದ ಹಾದಿ, ಸಾಮಾಜಿಕ ಕಾರ್ಯಗಳು, ಅವರ ಆದರ್ಶಗಳ ಮೇಲೆ ಬೆಳಕು ಚೆಲ್ಲುವ ಕಾರ್ಯವನ್ನು ವಿದ್ಯಾರ್ಥಿನಿ ತನ್ನ ಪ್ರಬಂಧ ಬರವಣಿಗೆಯಲ್ಲಿ ಮಾಡಿದ್ದಳು.

ಇನ್ನೂ ನಾಡಪ್ರಭು ಕೆಂಪೇಗೌಡ ಅವರ ಆಡಳಿತ ಹಾಗೂ ದಕ್ಷ ಆಡಳಿತ, ದೂರದೃಷ್ಟಿ ಯೋಜನೆಗಳ ಬಗ್ಗೆ ಇಂದಿನ ಯುವ ಪೀಳಿಗೆಯಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ತಾ‌ಲೂಕಾ ಮಟ್ಟದಲ್ಲಿ ಪ್ರಬಂಧ, ಚರ್ಚೆ, ರಸಪ್ರಶ್ನೆಯಂತಹ ಅನೇಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ತಾಲೂಕಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ನಕುಶಾಳಿಗೆ ಅಥಣಿ ತಹಸೀಲ್ದಾರ್ ಸಿದರಾಯ ಭೋಸಗಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಮೊರಟಗಿ ಪ್ರಮಾಣ ಪತ್ರ ಹಾಗೂ ಕಾದಂಬರಿ ಸಮಗ್ರ ಸಾಹಿತ್ಯ ಸಂಪುಟದ 14 ಪುಸ್ತಕಗಳನ್ನು ನೀಡಿ ಸನ್ಮಾನಿಸಿ ಶೈಕ್ಷಣಿಕವಾಗಿ ಇದೇ ರೀತಿ ಇನ್ನಷ್ಟು ಹೆಚ್ಚಿನ ಸಾಧನೆ ಮಾಡುವಂತೆ ಶುಭಹಾರೈಸಿದ್ದಾರೆ.

ಇನ್ನೂ ಪ್ರಥಮ ಪಿಯುಸಿ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಉಪನ್ಯಾಸಕ ಬಳಗ ಸಂತಸ ವ್ಯಕ್ತಪಡಿಸಿದೆ. ಅಲ್ಲದೆ ನಕುಶಾಳ ಪ್ರತಿಭೆಗೆ ಸಂಬರಗಿ ಗ್ರಾಮದ ಸಾಮಾಜಿಕ ಸಂಘಟನೆ ಯೂಥ್ ಫೌಂಡೇಶನ್ ಕೂಡ ಅಭಿನಂದಿಸಿ ಶುಭಾಶಯಗಳನ್ನು ತಿಳಿಸಿದೆ.

ಕಾರ್ಯಕ್ರಮದಲ್ಲಿ ಅಥಣಿ ತಾಲೂಕಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು, ಕಾಲೇಜಿನ ಉಪನ್ಯಾಸಕ ವರ್ಗ‌ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!