ಪರೀಕ್ಷೆ ಬರೆದ ಒಂದು ಗಂಟೆಯಲ್ಲೇ ಫಲಿತಾಂಶ ; ವಿಶಿಷ್ಟ ದಾಖಲೆ ಬರೆದ ವಿಟಿಯು
ಬೆಳಗಾವಿ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಂತಿಮ ಸೆಮಿಸ್ಟರ್ ಬಿ.ಇ./ಬಿ.ಟೆಕ್/ಬಿ.ಪ್ಲಾನ್/ಬಿ.ಆರ್ಕ್/ಬಿ.ಎಸ್ಸಿ (ಆನರ್ಸ್) ಪರೀಕ್ಷೆಯ ಫಲಿತಾಂಶಗಳನ್ನು ಪರೀಕ್ಷೆ ಮುಗಿದ ಕೇವಲ ಒಂದು ಗಂಟೆಯೊಳಗೆ ಫಲಿತಾಂಶ ಪ್ರಕಟಿಸುವ ಮೂಲಕ ವಿಶಿಷ್ಟ ದಾಖಲೆ ಬರೆದಿದೆ.
ಈ ಹಿಂದೆ ಪರೀಕ್ಷೆ ಬರೆದ ಮೂರು ಗಂಟೆಯಲ್ಲಿ ಫಲಿತಾಂಶ ಪ್ರಕಟಿಸಿದ್ದ ವಿಟಿಯು ಸಧ್ಯ ಮೇ. 30 ರ ಸಂಜೆ ಪರೀಕ್ಷೆ ಮುಗಿದ ಕೇವಲ ಒಂದು ಗಂಟೆಯಲ್ಲೇ ಫಲಿತಾಂಶ ಪ್ರಕಟಿಸಿ ತನ್ನ ಹಿಂದಿನ ದಾಖಲೆಯನ್ನೇ ಮುರಿದಿದೆ. 50,321 ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳ ಪರೀಕ್ಷೆಗಳು ಮುಗಿದ ಕೇವಲ ಒಂದು ಗಂಟೆಯ ನಂತರ ಫಲಿತಾಂಶವನ್ನು ಬಿಡುಗಡೆ ಮಾಡುವ ಮೂಲಕ ಈ ಐತಿಹಾಸಿಕ ಸಾಧನೆಯನ್ನು ಮಾಡಲಾಗಿದೆ ಎಂದು ವಿ ಟಿ ಯು ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಾಖಲೆಯ ಸಮಯದಲ್ಲಿ ಫಲಿತಾಂಶಗಳನ್ನು ಪ್ರಕಟಿಸುವ ಮೂಲಕ ವಿಟಿಯು ತನ್ನ ಐತಿಹಾಸಿಕ ಮೈಲಿಗಲ್ಲನ್ನು ಮುರಿಯುತ್ತಿರುವುದು ಇದು ಎರಡನೇ ಬಾರಿ ಆಗಿದ್ದು ಮೊದಲ ಬಾರಿಗೆ, 2019 ರ ಬ್ಯಾಚ್ ನ ಕೊನೆಯ ಸೆಮಿಸ್ಟರ್ ಫಲಿತಾಂಶವನ್ನು ಇದೆ ದಿನ ಅಂದರೆ ಮೇ 30 2023 ರಲ್ಲಿ ಅಂತಿಮ ಪರೀಕ್ಷೆಯ ಕೇವಲ 2 ದಿನಗಳ ನಂತರ 43,662 ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿತ್ತು,
ಎರಡನೇ ಬಾರಿಗೆ, 2020 ರ ಬ್ಯಾಚ್ ಫಲಿತಾಂಶವನ್ನು 2024 ರ ಇದೆ ದಿನ ಅಂದರೆ ಮೇ 30 (30.05.2024) ರಂದು ಕೊನೆಯ ಪರೀಕ್ಷೆ ಮುಗಿದ 3 ಗಂಟೆಗಳ ಒಳಗೆ 37,011 ವಿದ್ಯಾರ್ಥಿಗಳ ಪ್ರಕಟಿಸಿ ಇತಿಹಾಸ ರಚಿಸಿತ್ತು ಮತ್ತೆ ಇವತ್ತು ಅದೇ ದಿನ ಅಂದರೆ 2025 ರ ಮೇ 30 ರಂದು 2021 ರ ಬ್ಯಾಚ್ ನ ಕೊನೆಯ ಸೆಮಿಸ್ಟರ್ ನ 50,321 ವಿದ್ಯಾರ್ಥಿಗಳ ಪರೀಕ್ಷೆಯ ಫಲಿತಾಂಶವನ್ನು ಅಂತಿಮ ಪರೀಕ್ಷೆ ಮುಗಿದ ಕೇವಲ 1 ಗಂಟೆಯೊಳಗೆ ಪ್ರಕಟಿಸಿ ಮತ್ತೊಂದು ಐತಿಹಾಸಿಕ ದಾಖಲೆ ಮಾಡಿದೆ. ಜೊತೆಗೆ ಈ ಫಲಿತಾಂಶವನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಅವರ ವಾಟ್ಸಾಪ್ನಲ್ಲಿ ಕಳುಹಿಸಲಾಗಿದೆ.
ಬಿಇ, ಬಿ.ಟೆಕ್., ಬಿ.ಆರ್ಕ್, ಬಿಪ್ಲಾನ್. ಬಿ.ಎಸ್ಸಿ. (ಆನರ್ಸ್) ಕಾರ್ಯಕ್ರಮಗಳ ಫಲಿತಾಂಶಗಳು ದಾಖಲೆ ಸಮಯದಲ್ಲಿ ಬಿಡುಗಡೆಯಾಗುವುದರಿಂದ ವಿದ್ಯಾರ್ಥಿಗಳಿಗೆ ಉದ್ಯೋಗ ಹುಡುಕಾಟ ಮತ್ತು ಮುಂದಿನ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಪ್ರಯೋಜನವಾಗುತ್ತದೆ.ಮೇ 31 ಅಂದರೆ ನಾಳೆಯಿಂದ ತಮ್ಮ ಎಲ್ಲಾ ಸೆಮಿಸ್ಟರ್ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಉತ್ತೀರ್ಣಹೊಂದಿದ ವಿದ್ಯಾರ್ಥಿಗಳು ತಮ್ಮ
ತಾತ್ಕಾಲಿಕ ಪದವಿ ಪ್ರಮಾಣಪತ್ರಗಳಿಗೆ (ಪಿಡಿಸಿ) ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಕುಲಪತಿ ಪ್ರೊ ಎಸ. ವಿದ್ಯಾಶಂಕರ್ ತಿಳಿಸಿದ್ದಾರೆ. ಜೂನ್ 3 ರಿಂದ ತಾತ್ಕಾಲಿಕ ಪದವಿ ಪ್ರಮಾಣಪತ್ರಗಳಿಗೆ (ಪಿಡಿಸಿ) ವಿತರಿಸಲಾಗುವುದು ಹಾಗೆಯೇ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವವರು ತಾತ್ಕಾಲಿಕ ಪದವಿ ಪ್ರಮಾಣಪತ್ರಗಳಿಗೆ (ಪಿಡಿಸಿ) ಅರ್ಜಿ ಸಲ್ಲಿಸಬಾರದು ಎಂದು ಕುಲಪತಿ ಪ್ರೊ ಎಸ. ವಿದ್ಯಾಶಂಕರ್ ತಿಳಿಸಿದ್ದಾರೆ.
ಈ ಗಮನಾರ್ಹ ಸಾಧನೆಯು ವಿಟಿಯುನ ದೂರದೃಷ್ಟಿಯ ನಾಯಕತ್ವ, ಸಿಬ್ಬಂದಿಯ ಬದ್ಧತೆ ಮತ್ತು ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಸಂದರ್ಭದಲ್ಲಿ, ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ್ ಎಸ್. ಅವರು ಎಲ್ಲ ವಿಟಿಯು ಸಿಬ್ಬಂದಿಗಳಿಗೆ ಮತ್ತು ಸಂಯೋಜಿತ ಎಂಜಿನಿಯರಿಂಗ್ ಕಾಲೇಜುಗಳ ಎಲ್ಲಾ ಸಿಬ್ಬಂದಿಯನ್ನು ಅಭಿನಂದಿಸಿದರು. ಇದಲ್ಲದೆ, ವಿಟಿಯು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗಾಗಿ ಬದ್ಧವಾಗಿದೆ ಮತ್ತು ಅವಿರತವಾಗಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.


