ಜಾತಿಗಣತಿಯಲ್ಲಿ ಜೈನರನ್ನು ಕಡಿಮೆ ತೋರಿಸಲಾಗಿದೆ : ಕುಲರತ್ನ ಭೂಷಣ ಶ್ರೀ
ಅಥಣಿ : ಜೈನ ಸಮುದಾಯದ ಗಣತಿಯ ಅಂಕಿ ಸಂಖ್ಯೆಯು ತಪ್ಪಾಗಿದ್ದು. ನಿಷ್ಪಕ್ಷಪಾತವಾಗಿ ಮರುಗಣತಿಯಾಗಬೇಕು. ರಾಜ್ಯಾದ್ಯಂತ ಜೈನ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು ವಾಸ್ತವಿಕ ಅಂಕಿ ಅಂಶವನ್ನು ದಾಖಲಿಸಬೇಕೆಂದು ಹಳಿಂಗಳಿ ಭದ್ರಗಿರಿ ಬೆಟ್ಟದ ಆಚಾರ್ಯ ರತ್ನ 108 ಕುಲರತ್ನ ಭೂಷಣ ಮನಿ ಮಹಾರಾಜರು ಹೇಳಿದರು.
ಅವರು ತಾಲೂಕಿನ ಮಹಿಷವಾಡಗಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕರ್ನಾಟಕ ರಾಜ್ಯಾದ್ಯಂತ 25 ಲಕ್ಷದಿಂದ 30 ಲಕ್ಷದವರೆಗೆ ಜೈನ ಸಮುದಾಯವಿದೆ. ಕಡಿಮೆ ಜನಸಂಖ್ಯೆಯನ್ನು ತೋರಿಸಿರುವುದು ನೋವು ತಂದಿದೆ. ಇದನ್ನು ನಾವು ಒಪ್ಪಿಕೊಳ್ಳುವುದಿಲ್ಲ.
ಜೈನ ಸಮಾಜಕ್ಕೆ ದೊರೆಯಬೇಕಾದ ಸೌಲಭ್ಯಗಳನ್ನು ಯಾವುದೇ ಸರ್ಕಾರ ಇದ್ದರೂ ಒದಗಿಸಬೇಕು.ಎಲ್ಲರೊಂದಿಗೆ ಸಮಾನ ಮನಸ್ಕಾರಾಗಿ ಸಾಗುವ ಜೈನ ಧರ್ಮಕ್ಕೆ ಅನ್ಯಾಯ ವಾಗಬಾರದು. ಸಾತ್ವಿಕ ಆಹಾರ ವಿಚಾರಗಳೊಂದಿಗೆ ಅಹಿಂಸಾ ಧರ್ಮವನ್ನೇ ಪರಿಪಾಲಿಸಿಕೊಂಡ ಬಂದ ಜೈನ ಧರ್ಮ ಎಲ್ಲರಿಗೂ ಒಳಿತನ್ನೆ ಬಯಸುತ್ತದೆ.
ಸರ್ಕಾರಕ್ಕೆ ಮರುಗಣತಿ ಮಾಡಲು ಆಗದಿದ್ದರೆ ಜೈನ ಸಮುದಾಯದ ಮೂಲಕವೇ ಮರುಗಣತಿ ಮಾಡಿ ಸರಿಯಾದ ಅಂಕಿ ಅಂಶಗಳನ್ನು ಸರ್ಕಾರಕ್ಕೆ ನೀಡುವ ವ್ಯವಸ್ಥೆ ಮಾಡಲಾಗುವುದು. ಜೈನ ಸಮುದಾಯದವರು ಧರ್ಮ ಹಾಗೂ ಜಾತಿ ಬರೆಸುವಾಗ ಜೈನ ಎಂದೇ ಬರೆಸಬೇಕು.
ಶ್ವೇತಾಂಬರ ಹಾಗೂ ದಿಗಂಬರ ಎಂದು ಬರೆಸಿ ಗೊಂದಲವನ್ನುಂಟು ಮಾಡಬಾರದು. ಸರ್ಕಾರ ಜನಗಣತಿಯ ಸಂಖ್ಯೆಯನ್ನು ಸರಿಪಡಿಸಿ ನ್ಯಾಯ ಒದಗಿಸುವ ಭರವಸೆ ಇದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಜೈನ ಸಮುದಾಯದ ಹಿರಿಯ ಮುಖಂಡ ಅರುಣ ಯಲಗುದ್ರಿ, ಬಾಬಾಸಾಹೇಬ ಪಾಟೀಲ, ದೀಪಕ ಪಾಟೀಲ, ವಿವೇಕಾನಂದ ಯಲಗುದ್ರಿ, ಅಶೋಕ ಮುಗ್ಗನವರ, ಅಮರ ದುರ್ಗಣ್ಣವರ,
ಮಲ್ಲು ಪಾಸಾಣಿ, ಮಹಾವೀರ ಶಿರಹಟ್ಟಿ, ಲಕ್ಷ್ಮಣ ಚಿಪ್ಪಾಡಿ, ಕುಮಾರ ಪಾಸಾಣಿ, ಬಸಗೊಂಡ ಮುಗ್ಗನವರ, ಜಿನ್ನು ನಂದಾಗಾಂವ, ಮಲ್ಲಪ್ಪ ಶಿರಹಟ್ಟಿ, ಬಸಗೊಂಡ ಝುಂಜರವಾಡ, ಆಶೋಕ ಹಳಿಂಗಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


