ಬೈಲಹೊಂಗಲ – ಕೈಚೀಲಕ್ಕಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ
ಬೈಲಹೊಂಗಲ: ಉಪಹಾರದ ಕೈಚೀಲಗೋಸ್ಕರ ಒಬ್ಬರಿಗೋಬ್ಬರಿಗೆ ಮಾತಿನ ಚಕಮಕಿ ನಡೆದು ಓರ್ವನನ್ನು ಕುಡಗೋಲಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ತಾಲೂಕಿನ ಬುಡರಕಟ್ಟಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಕೊಲೆಯಾದ ವೃದ್ಧನನ್ನು ಬುಡರಕಟ್ಟಿ ಗ್ರಾಮದ ರುದ್ರಪ್ಪ ಶಿವಬಸಪ್ಪ ಪಾಗಾದ(64) ಎಂದು ಗುರುತಿಸಲಾಗಿದೆ. ಆರೋಪಿಯನ್ನು ಅದೇ ಗ್ರಾಮದ ಮಲ್ಲಪ್ಪ ಶಿವಶಂಕರ ಯರಗೊಪ್ಪ(42) ಎಂದು ಗುರುತಿಸಲಾಗಿದೆ.
ಘಟನೆ ಹಿನ್ನಲೆ : ರುದ್ರಪ್ಪ ಎಂಬಾತ ತನ್ನ ಉಪಹಾರದ ಕೈಚೀಲವನ್ನು ಗ್ರಾ.ಪಂ ಕಟ್ಟೆಯ ಮೇಲೆ ಇಟ್ಟು ಇನ್ನೊರ್ವ ಕೂಲಿ ಕಾರ್ಮಿಕನನ್ನು ಕರೆಯಲು ಹೋಗಿದ್ದ. ರುದ್ರಪ್ಪನ ಉಪಹಾರದ ಕೈಚೀಲವನ್ನೂ ಆರೋಪಿ ಮಲ್ಲಪ್ಪ ತೆಗೆದುಕೊಂಡು ಬುಡರಕಟ್ಟಿ ರಸ್ತೆಯ ಹೊರಟಿದ್ದಾನೆ.
ಈ ಸಂದರ್ಭದಲ್ಲಿ ರುದ್ರಪ್ಪ ತನ್ನ ಉಪಹಾರದ ಕೈಚೀಲವನ್ನೂ ಕಸಿದುಕೊಂಡಾಗ, ಆರೋಪಿ ಮಲ್ಲಪ್ಪ ತನ್ನ ಕೈಯಲ್ಲಿದ್ದ ಕುಡಗೋಲಿನಿಂದ ಮುಖಕ್ಕೆ, ತಲೆಗೆ ಬಲವಾಗಿ ಹೊಡೆದ ಪರಿಣಾಮ ತೀವ್ರವಾಗಿ ರಕ್ತಸ್ರಾವಗೊಂಡು ಸ್ಥಳದಲ್ಲಿಯೇ ಮೃತನಾಗಿದ್ದಾನೆ.
ಆರೋಪಿ ಮಲ್ಲಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ದೊಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


