ಬೆಳಗಾವಿ : ಭಾಷಾ ವಿಷಯದಲ್ಲಿ ಸದಾಕಾಲವೂ ಕನ್ನಡಿಗರ ವಿರೋಧಿ ನಡೆ ಹೊಂದಿರುವ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಅವರದೇ ರಾಜ್ಯದ ಯುವಕನೋರ್ವ ತನ್ನ ಆಪ್ತ ಸ್ನೇಹಿತನಿಗೆ ವಿಧಾನಸಭಾ ಟಿಕೆಟ್ ನೀಡುವಂತೆ ರಕ್ತದಲ್ಲಿ ಕನ್ನಡ ಪತ್ರ ಬರೆಯುವ ಮೂಲಕ ಭಾಷಾ ಪ್ರೇಮ ಮೆರೆದಿದ್ದಾನೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಟಿಕೆಟ್ ಜ್ವರ ಜೋರಾಗಿದೆ. ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ಸೇರಿದಂತೆ ಅನೇಕ ಭಾಗಗಳಲ್ಲಿ ಕನ್ನಡ ಭಾಷಿಕ ಮತದಾರರೇ ನಿರ್ಣಾಯಕ ಪಾತ್ರ ವಹಿಸುತ್ತಾರೆ.
ಈ ಹಿನ್ನಲೆಯಲ್ಲಿ ಗಡಿ ಭಾಗದ ಮಹಾರಾಷ್ಟ್ರ ಜನಪ್ರತಿನಿಧಿಗಳು ಸಧ್ಯ ಕನ್ನಡಿಗರ ಮತ ಸೆಳೆಯಲು ಕಸರತ್ತು ಮಾಡುತ್ತಿದ್ದಾರೆ. ಈ ಮಧ್ಯೆ ಜತ್ ತಾಲೂಕಿನ ಬಿಳ್ಳೂರ ಗ್ರಾಮದ ಯುವಕ ತನ್ನ ಆಪ್ತ ಸ್ನೇಹಿತನಿಗೆ ಬಿಜೆಪಿ ಟಿಕೆಟ್ ನೀಡುವಂತೆ ಮಹಾರಾಷ್ಟ್ರ ಸಿಎಂ ಗೆ ಕನ್ನಡದಲ್ಲಿ ಪತ್ರ ಬರೆದಿದ್ದಾನೆ.
ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ತಮ್ಮನಗೌಡ ಪಾಟೀಲ್ ಗೆ ಬರುವ ವಿಧಾನಸಭೆ ಚುನಾವಣೆಯಲ್ಲಿ ಜತ್ ತಾಲೂಕಿನಿಂದ ಬಿಜೆಪಿ ಅಥವಾ ಮಿತ್ರ ಪಕ್ಷದಿಂದ ಟಿಕೆಟ್ ನೀಡಬೇಕೆಂದು ಯುವಕ ಪೀರು ಕೋಳಿ ರಕ್ತದಲ್ಲೇ ಪತ್ರ ಬರೆದಿದ್ದಾನೆ.
ವಿಶೇಷ ಎಂದರೆ ಈ ಪತ್ರ ಕನ್ನಡದಲ್ಲಿದೆ. ಭಾಷಾ ವಿಷಯದಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ ಸಿಂದೆ ಯಾವತ್ತೂ ರಾಜ್ಯ ವಿರೋಧಿ ನಡೆಯನ್ನೇ ಹೊಂದಿದವರು. ಆದರೆ ಈಗ ಸಿಎಂ ಗೆ ಕನ್ನಡ ಪತ್ರ ಬರೆಯುವ ಮೂಲಕ ಯುವಕ ಭಾಷಾ ಪ್ರೀತಿ ಮೆರೆದಿದ್ದಾನೆ.
ಯುವಕ ಪೀರು ಕೋಳಿ ತನ್ನ ಕೃಷಿ ಕಾಯಕದೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು ರಾಜಕೀಯದಲ್ಲೂ ಗುರುತಿಸಿಕೊಂಡಿದ್ದಾನೆ. ಹಲವು ಬಾರಿ ಗಡಿ ಭಾಗದ ಸಮಸ್ಯೆ ಕುರಿತು ಹೋರಾಟಗಳ ಮೂಲಕ
ಮಹಾರಾಷ್ಟ್ರ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ. ಮಹಾರಾಷ್ಟ್ರ ದ ಜತ್ ತಾಲೂಕಿನಲ್ಲಿ ಜತ್ ಕನ್ನಡಿಗರು ಹೆಸರಿನ ಸಂಘಟನೆ ಸದಸ್ಯನಾಗಿ ಕನ್ನಡಪರ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದಾರೆ.


