ಪ್ರಕರಣವೊಂದನ್ನು ಇತ್ಯರ್ಥಪಡಿಸಿಕೊಡಲು ಸಾರ್ವಜನಿಕರಿಂದ ಭಾರಿ ಮೊತ್ತದ ಲಂಚ (Bribe) ಬೇಡಿಕೆ (Corruption) ಇಟ್ಟಿದ್ದ ಸಬ್ ಇನ್ಸ್‌ಪೆಕ್ಟರ್ (PSI) ಒಬ್ಬರು ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆ ವೇಳೆ ಹಣದ ಸಮೇತ ಸಿಕ್ಕಿಬಿದ್ದಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಹಳೇಬೀಡು ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ್ ಲೋಕಾಯುಕ್ತರ ಬಲೆಗೆ ಬಿದ್ದ ಅಧಿಕಾರಿ.
ಒಂದು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಪಿಎಸ್‌ಐ ಠಾಣಿಯಲ್ಲಿ ದಾಖಲಾಗಿದ್ದ ಎನ್‌ಸಿಆರ್ (Non-Cognizable Report) ಪ್ರಕರಣವೊಂದನ್ನು ಸುಲಭವಾಗಿ ಬಗೆಹರಿಸಲು ಪಿಎಸ್‌ಐ ಮಂಜುನಾಥ್ ಅವರು ನವೀನ್ ಎಂಬುವರಿಂದ ಬರೋಬ್ಬರಿ 1 ಲಕ್ಷ ರೂಪಾಯಿ ಲಂಚ ನೀಡುವಂತೆ ಪೀಡಿಸುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ಸಂತ್ತಸ್ತರು ಲೋಕಾಯುಕ್ತ ಪೊಲೀಸರ ಮೊರೆ ಹೋಗಿದ್ದರು. ಅಧಿಕಾರಿಗಳ ಸಲಹೆಯಂತೆ ನವೀನ್ ಅವರು ಲಂಚದ ಒಟ್ಟು ಮೊತ್ತದ ಪೈಕಿ ಮುಂಗಡವಾಗಿ 20,000 ರೂಪಾಯಿ ಹಣವನ್ನು ಪಿಎಸ್‌ಐಗೆ ನೀಡಲು ಮುಂದಾಗಿದ್ದರು.
ಗುರುವಾರ ಹಳೇಬೀಡು ತಾಲ್ಲೂಕಿನ ಹೊಟೇಲೊಂದರಲ್ಲಿ ಪಿಎಸ್‌ಐ ಮಂಜುನಾಥ್ ಸಾರ್ವಜನಿಕರಿಂದ ನವೀನ್ ಅವರಿಂದ ಈ ಮುಂಗಡ ಹಣವನ್ನು ಸ್ವೀಕರಿಸುತ್ತಿದ್ದರು. ಈ ವೇಳೆ ಹೊಂಚು ಹಾಕಿ ಕುಳಿತಿದ್ದ ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ಶೀಲಾ ಹಾಗೂ ಗಿರಿರಾಜ್ ನೇತೃತ್ವದ ವಿಶೇಷ ತಂಡವು ದಾಳಿ ನಡೆಸಿ, ಲಂಚದ ಹಣದೊಂದಿಗೆ
ಪಿಎಸ್‌ಐ ಮಂಜುನಾಥ್‌ರನ್ನು ರೆಡ್‌ಹ್ಯಾಂಡ್ ಆಗಿ ವಶಕ್ಕೆ ಪಡೆದಿದೆ. ಸದ್ಯ ಲೋಕಾಯುಕ್ತ ಅಧಿಕಾರಿಗಳು ಪಿಎಸ್‌ಐ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.


