ಗ್ರಾಮ ಪಂಚಾಯತಿ ಮಹಿಳಾ ಸದಸ್ಯರ ಪರವಾಗಿ ಪತಿ ಅಧಿಕಾರ ಚಲಾಯಿಸುವಂತಿಲ್ಲ…!
ಬೆಂಗಳೂರು : ಗ್ರಾಮ ಪಂಚಾಯ್ತಿಗಳಲ್ಲಿ ಚುನಾಯಿತರಾಗಿರುವ ಮಹಿಳಾ ಸದಸ್ಯರ ಪರವಾಗಿ ಅವರ ಪತಿ ಸೇರಿದಂತೆ ಕುಟುಂಬದ ಯಾವುದೇ ಸದಸ್ಯರು ಗ್ರಾಮ ಪಂಚಾಯತಿ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡಿದರೆ ಅಂತವರ ಸದಸ್ಯತ್ವ ರದ್ದುಗೊಳಿಸುವುದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಸಿಇಒ ರವಿಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಗೆ ಬರುವ ಗ್ರಾಮ ಪಂಚಾಯ್ತಿಗಳಲ್ಲಿ ಅನೇಕರಿಂದ ಕುಟುಂಬಸ್ಥರ ಹಸ್ತಕ್ಷೇಪದ ಕುರಿತು ದೂರು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಕರ್ನಾಟಕ ಗ್ರಾಮ ಪಂಚಾಯತ್ ಸ್ವರಾಜ್ ಮತ್ತು ಪಂಚಾಯತ ರಾಜ್ ಅದಿನಿಯಮ 1993 ಪ್ರಕಾರ ಚುನಾಯಿತ ಸದಸ್ಯರ ಪರವಾಗಿ ಕುಟುಂಬದವರು ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವುದು ಕಾನೂನು ಬಾಹಿರವಾಗಿದೆ.
ಪಂಚಾಯತ್ ರಾಜ್ ಕಾನೂನು ಅನ್ವಯ ಗ್ರಾಮ ಪಂಚಾಯತಿ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಕಾನೂನು ಬಾಹಿರವಾಗಿದ್ದು, ಇಂತಹ ಪ್ರಕರಣ ಕಂಡುಬಂದಲ್ಲಿ ಅಂತಹ ಸದಸ್ಯರ ಸದಸ್ಯತ್ವ ರದ್ದುಗೊಳಿಸಲಾಗುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್ ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದೆಲ್ಲೆಡೆ ಕಾನೂನು ವಿಸ್ತರಿಸಲು ಆಗ್ರಹ : ಗ್ರಾಮ ಪಂಚಾಯತಿಗಳಲ್ಲಿ ಮಹಿಳಾ ಸದಸ್ಯರ ಪರವಾಗಿ ಅವರ ಗಂಡ ಹಾಗೂ ಕುಟುಂಬ ಸದಸ್ಯರು ಅಧಿಕಾರ ಚಲಾಯಿಸುತ್ತಾರೆ. ಇದರಿಂದ ಗ್ರಾಮದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಏನಾದರು ವಿಚಾರಿಸಲು ಹೋದರೆ ವೈಯಕ್ತಿಕವಾಗಿ ತಗೆದುಕೊಂಡು ಜಗಳ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಮಾತ್ರ ಅಧಿಕಾರ ಚಲಾಯಿಸುವ ಕಾನೂನು ರಾಜ್ಯದೆಲ್ಲೆಡೆ ಜಾರಿ ಮಾಡುವಂತೆ ಜನರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.