VIDEO – ಕಾರ್ಮಿಕರಿಗೆ ಸಿಗಬೇಕಿದ್ದ ಆಹಾರದ ಕಿಟ್ ಬೆಳಗಾವಿ ಬಿಜೆಪಿ ಕಾರ್ಪೊರೇಟರ್ ಸಂಬಂಧಿ ಪಾಲು
ಬೆಳಗಾವಿ : ಕೊರೊನಾ ಎರಡನೇ ಅಲೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ನೊಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಇತರೆ ಕಾರ್ಮಿಕರಿಗೆ ನೀಡಲಾಗಿದ್ದ ಆಹಾರದ ಕಿಟ್ ಗಳು ಬೆಳಗಾವಿ ಬಿಜೆಪಿ ಕಾರ್ಪೊರೇಟರ್ ಸಂಬಂಧಿಯೊಬ್ಬರ ಮನೆ ಸೇರಿವೆ.
ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿರುವ ಕಟ್ಟಡ ಕಾರ್ಮಿಕರಿಗೆ ಕೊಡಲು ರಾಜ್ಯ ಕಾರ್ಮಿಕ ಇಲಾಖೆಯಿಂದ ಆಹಾರ ಕಿಟ್ ಹಂಚಿಕೆ ಮಾಡಲಾಗಿತ್ತು. ಆದರೆ ಬಡ ಕಾರ್ಮಿಕರ ಮನೇ ಸೇರಬೇಕಿದ್ದ ಆಹಾರದ ಪೊಟ್ಟಣಗಳು ವಾರ್ಡ ನಂ – 40 ರ ಬಿಜೆಪಿ ಕಾರ್ಪೊರೇಟರ್ ರೇಶ್ಮಾ ಕಾಮ್ಕರ್ ಸಂಬಂಧಿ ನಾರಾಯಣ ಕಾಮ್ಕರ್ ಎಂಬುವವರ ಮನೆ ಸೇರಿದ್ದು ಸುಮಾರು 1,500 ಕ್ಕೂ ಅಧಿಕ ಆಹಾರ ಪೊಟ್ಟಣಗಳನ್ನು ಬಚ್ಚಿಡಲಾಗಿದೆ.
ಕೊರೊನಾ 2ನೇ ಅಲೆ ಹರಡುವಿಕೆ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್‌ಡೌನ್ ಘೋಷಿಸಿತ್ತು. ಈ ವೇಳೆ, ಸಂಕಷ್ಟಕ್ಕೆ ಸಿಲುಕಿದ ಕಾರ್ಮಿಕರಿಗೆ ಅನುಕೂಲವಾಗಲೆಂದು ಕಾರ್ಮಿಕ ಇಲಾಖೆ ಆಹಾರ ಧಾನ್ಯಗಳ ಕಿಟ್ ವಿತರಣೆಗೆ ಮುಂದಾಗಿತ್ತು. ಕಾರ್ಮಿಕರಿಗೆ ವಿತರಿಸಲೆಂದೇ ಸ್ಥಳೀಯ ಶಾಸಕರಿಗೆ ಸಾವಿರಾರು ಕಿಟ್‌ಗಳನ್ನು ನೀಡಿತ್ತು. ಅವುಗಳನ್ನೂ ಫಲಾನುಭವಿಗೆ ವಿತರಿಸದೇ ಹಳೆ ಪಿ.ಬಿ. ರಸ್ತೆಯ ಸಾಯಿ ಭವನದಲ್ಲಿ ದಾಸ್ತಾನು ಮಾಡಲಾಗಿತ್ತು.ಆದರೆ ನಂತರ ಆ ಕಿಟ್ ಗಳು ಮಾಯವಾಗಿದ್ದು ಬಿಜೆಪಿ ಮುಖಂಡನ ಮನೆಯಲ್ಲಿ ಪತ್ತೆಯಾಗಿವೆ.
ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ : ಕಟ್ಟಡ ಕಾರ್ಮಿಕರಿಗೆ ವಿತರಿಸಲು ಕಾರ್ಮಿಕ ಇಲಾಖೆ ನೀಡಿದ್ದ ದಿನಸಿ ಸಾಮಗ್ರಿ ಕಿಟ್‌ಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಹಾಗೂ ಅವಧಿ ಮುಗಿದ ಆಹಾರ ಧಾನ್ಯಗಳ ಕಿಟ್‌ಗಳನ್ನು ಈಗ ಕಾರ್ಮಿಕರಿಗೆ ವಿತರಿಸುತ್ತಿರುವ ಬಿಜೆಪಿ ಕಾರ್ಯಕರ್ತರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ವಡಗಾವಿ , ಖಾಸಬಾಗದ ಸಾಮಾಜಿಕ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.