ಕಾಂಗ್ರೆಸ್ ಸಮಾವೇಶದಿಂದ ದೂರ ಉಳಿದ ಲಕ್ಷ್ಮಣ ಸವದಿ ; ಬಿಜೆಪಿ ಸೇರುವರಾ ಸಾಹುಕಾರ್…?
ಬೆಳಗಾವಿ : ಗ್ಯಾರಂಟಿ ಯೋಜನೆ ಅನುಷ್ಠಾನದ ನಂತರ ಕಾಂಗ್ರೆಸ್ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಫಲಾನುಭವಿಗಳ ಸಭೆ ನಡೆಸುತ್ತಿದೆ. ಈ ಕುರಿತು ಬೆಳಗಾವಿ ನಗರದಲ್ಲಿ ಇಂದು ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿತ್ತು. ಆದರೆ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ( Laxman Savadi )ಅನುಪಸ್ಥಿತಿ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಕಾಂಗ್ರೆಸ್ ತೊರೆದು ಸಾಹುಕಾರ್ ಬಿಜೆಪಿ ಸೇರ್ಪಡೆ ಆಗುತ್ತಾರೆ ಎಂಬ ಊಹಾಪೋಹಗಳ ಮಧ್ಯೆ ಇಂದು ನಡೆದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಸಮಾವೇಶದಲ್ಲಿ ಗೈರಾಗಿದ್ದು ಹಲವು ಚರ್ಚೆಗೆ ಕಾರಣವಾಗಿದೆ. ಈಗಾಗಲೇ ಬಿಜೆಪಿ ಜೊತೆ ಮಾತುಕತೆ ನಡೆಸಿದ್ದು ಸವದಿ ಕಾಂಗ್ರೆಸ್ ತೊರೆಯುತ್ತಾರೆ ಎಂಬ ಮಾತು ಜೋರಾಗಿದೆ.
ಲಕ್ಷ್ಮಣ ಸವದಿ ಬಿಜೆಪಿ ಸೇರ್ಪಡೆ ಆಗುವುದಾದರೆ ಅವರಿಗೆ ಎಂಪಿ ಚುನಾವಣಾ ಟಿಕೆಟ್ ನೀಡುವ ಕುರಿತು ಹಲವು ಚರ್ಚೆಗಳು ನಡೆಯುತ್ತಿವೆ. ಹಾಗೆಯೇ ಅವರ ಪುತ್ರನಿಗೆ ವಿಧಾನಸಭಾ ಟಿಕೆಟ್ ನೀಡುವ ಮಾತುಕತೆ ನಡೆಸಿದ್ದು ಇದಕ್ಕೆ ಸವದಿ ಯಾವುದೇ ಉತ್ತರ ನೀಡಿಲ್ಲ ಎಂದು ಹೇಳಲಾಗುತ್ತಿದೆ.
ಲಕ್ಷ್ಮಣ ಸವದಿ ಬಿಜೆಪಿ ಸೇರ್ಪಡೆ ಕುರಿತು ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್. ಲಕ್ಷ್ಮಣ ಸವದಿಯವರು ಬಿಜೆಪಿಗೆ ಹೋಗುತ್ತಾರೆಂಬ ವಿಷಯ ಖಂಡಿತ ತಮ್ಮ ಗಮನಕ್ಕೆ ಬಂದಿಲ್ಲ. ಅವರು ಕಾಂಗ್ರೆಸ್ಸಿಗೆ ಬರುವ ಸಂದರ್ಭದಲ್ಲಿ ನಾವೆಲ್ಲರೂ ಒಂದಾಗಿ ಪಾತ್ರ ನಿರ್ವಹಿಸಿದ್ದೇವು. ಏನೇ ಹೇಳಿ, ಯಾವುದೇ ಕಾರಣಕ್ಕೂ ಲಕ್ಷ್ಮಣ ಸವದಿಯವರು ಪಕ್ಷವನ್ನು ಬಿಡುವುದಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ( Laxmi hebalkar ) ಸ್ಪಷ್ಟಪಡಿಸಿದರು.
ಈ ಕುರಿತು ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ. ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ಅವರು ಬರುತ್ತಾರೆ, ಇವರು ಬರುತ್ತಾರೆ ಎಂದು ಹೇಳುತ್ತಾರೆ ಎಂದು ಲಕ್ಷ್ಮಣ ಸವದಿ ಕಾಂಗ್ರೆಸ್ ತೊರೆಯುವುದಿಲ್ಲ ಎಂದರು.


