ಬೆಳಗಾವಿ – ಭೀಕರ ರಸ್ತೆ ಅಪಘಾತ, ಇಬ್ಬರು ಯುವಕರು ಸಾವು
ಖಾನಾಪುರ : ತಾಲೂಕಿನ ಗುರ್ಲಗುಜಿ ಗ್ರಾಮದಲ್ಲಿ ಕ್ರೂಸರ್ ವಾಹನ ಹಾಗೂ ಬೈಕ್ ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಇಬ್ಬರು ಯುವರಕು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಖಾನಾಪುರ ತಾಲೂಕಿನ ಬೇಕವಾಡ ಗ್ರಾಮದ ರಾಮಲಿಂಗ (ಅಪ್ಪಿ) ಪಾಂಡುರಂಗ ಮುತಗೇಕರ (20), ಹನುಮಂತ ಮಹಾಬಲೇಶ್ವರ ಪಾಟೀಲ (20) ಮೃತಪಟ್ಟ ಯುವಕರು.
ಪ್ರತಿದಿನ ದ್ವಿಚಕ್ರ ವಾಹನದಲ್ಲಿ ನಂದಿಹಳ್ಳಿಯ ಖಾಸಗಿ ಸೈನಿಕ ತರಬೇತಿ ಕೇಂದ್ರಕ್ಕೆ ತರಬೇತಿಗೆ ಹೋಗುತ್ತಿದ್ದರು. ಡಿಕ್ಕಿಯ ರಭಸಕ್ಕೆ ಯುವಕರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಖಾನಾಪುರ ಪೊಲೀಸರು ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಖಾನಾಪುರ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.
ಫೆ.28ರಂದು ಬೇಕವಾಡ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮಿ ಜಾತ್ರೆ ನಡೆಯಲಿದ್ದು, ಜಾತ್ರೆಗೂ ಮುನ್ನವೇ ಈ ಘಟನೆ ನಡೆದಿರುವುದರಿಂದ ಇಡೀ ಬೇಕವಾಡ ಗ್ರಾಮದಲ್ಲಿ ದುಃಖದ ಛಾಯೆ ಆವರಿಸಿದೆ.


