Select Page

Advertisement

ಬರ ಅಧ್ಯಯನ ನಡೆಸಿದ ಕೇಂದ್ರ ತಂಡ ; ಎಷ್ಟು ಕೋಟಿ ₹ ಹಾನಿ ಸಂಭವಿಸಿದ್ದು ಗೊತ್ತಾ..?

ಬರ ಅಧ್ಯಯನ ನಡೆಸಿದ ಕೇಂದ್ರ ತಂಡ ; ಎಷ್ಟು ಕೋಟಿ ₹ ಹಾನಿ ಸಂಭವಿಸಿದ್ದು ಗೊತ್ತಾ..?

ಬೆಳಗಾವಿ : ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಎದುರಾಗಿರುವ ತೀವ್ರ ಬರ ಪರಿಸ್ಥಿತಿಯನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ಐದು ಜನ ಅಧಿಕಾರಿಗಳ ತಂಡ ಬರ ಅಧ್ಯಯನ ನಡೆಸಿತು.

ಶುಕ್ರವಾರ ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಿದ ಕೇಂದ್ರ ತಂಡ ಮೊದಲಿಗೆ ಬೈಲಹೊಂಗಲ ತಾಲ್ಲೂಕಿನ ನೇಸರಗಿ ಬಳಿಯ ನಾಗಪ್ಪ ಹಬಿ ಅವರ ಜಮೀನಿನಲ್ಲಿ ಸೋಯಾಬಿನ್ ಹಾಗೂ ರಾಜು ಹೊಂಗಲ್ ಹಾಗೂ ಬಸಪ್ಪ ಕುಂಟಿಗೇರಿ ಅವರ ಜಮೀನಿನಲ್ಲಿ ಕ್ಯಾರೆಟ್ ಬೆಳೆಹಾನಿಯನ್ನು ವೀಕ್ಷಿಸಿದರು. ನೇಸರಗಿ ಭಾಗದಲ್ಲಿಯೇ 295 ಹೆಕ್ಟೇರ್ ಕ್ಯಾರೇಟ್ ಬಿತ್ತನೆ ಮಾಡಲಾಗಿದೆ. ಇಳುವರಿ ಸಂಪೂರ್ಣ ಹಾಳಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.

ಚಚಡಿಯಲ್ಲಿ ವೀರಭದ್ರಪ್ಪ ಹೊಸಮನಿಯವರ ಒಂದೂವರೆ ಎಕರೆ ಸೂರ್ಯಕಾಂತಿ ಬೆಳೆಹಾನಿ ವೀಕ್ಷಿಸಿದರು.‌‌ ಈಗಾಗಲೇ 20 ಸಾವಿರ ಖರ್ಚು ಮಾಡಲಾಗಿದೆ ಎಂದು ರೈತರು ವಿವರಿಸಿದರು.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ಬೆಳೆವಿಮೆ ಪಾವತಿ, ಬೀಜ-ಗೊಬ್ಬರ, ಕೃಷಿ ಕೂಲಿಕಾರರ ಖರ್ಚು-ವೆಚ್ಚಗಳ ಬಗ್ಗೆ ಸ್ವತಃ ರೈತರಿಂದಲೇ ಮಾಹಿತಿಯನ್ನು ಪಡೆದುಕೊಂಡರು.

ಬೈಲಹೊಂಗಲ ತಾಲ್ಲೂಕಿನ ನೇಸರಗಿ, ಕಲಕುಪ್ಪಿ, ಸವದತ್ತಿ ತಾಲ್ಲೂಕಿನ ಚಚಡಿ, ಹಲಕಿ, ಯರಗಟ್ಟಿ ತಾಲ್ಲೂಕಿನ ಬೂದಿಗೊಪ್ಪ, ಯರಗಣವಿ, ರಾಮದುರ್ಗ ತಾಲ್ಲೂಕಿನ ಕೆ.ಚಂದರಗಿ, ಬೂದನೂರ/ಸಾಲಹಳ್ಳಿ ಮತ್ತಿತರ ಗ್ರಾಮದ ವ್ಯಾಪ್ತಿಯಲ್ಲಿ ಕೇಂದ್ರ ಅಧ್ಯಯನ ತಂಡವು ಭೇಟಿ ನೀಡಿ ಬೆಳೆಹಾನಿ ಪರಿಶೀಲಿಸಿತು.


ಜಿಲ್ಲೆಯಲ್ಲಿ 2.78 ಲಕ್ಷ ಹೆಕ್ಟೇರ್ ಬೆಳೆಹಾನಿ : 332 ಕೋಟಿ ರೂ. ಹಾನಿ

ಜಿಲ್ಲೆಯಲ್ಲಿ ಮಳೆಕೊರತೆಯಿಂದ 2.78 ಲಕ್ಷ ಹೆಕ್ಟೇರ್ ಬೆಳೆಹಾನಿಯಾಗಿದೆ. ಈ ಕುರಿತು ಸಮಗ್ರ ಮಾಹಿತಿ ಹಾಗೂ ಛಾಯಾಚಿತ್ರಗಳ ಮೂಲಕ ಪ್ರಾತ್ಯಕ್ಷಿಕೆ ನೀಡಲಾಗಿದೆ. ವಾಸ್ತವದಲ್ಲಿ ಕೃಷಿ ಹಾಗೂ ತೋಟಗಾರಿಕೆ ಸೇರಿದಂತೆ ಅಪಾರ ಬೆಳೆಹಾನಿಯಾಗಿದೆ. ಆದರೆ ಎನ್.ಡಿ.ಆರ್.ಎಫ್. ಮಾರ್ಗಸೂಚಿ ಪ್ರಕಾರ 332 ಕೋಟಿ ಆಗಲಿದೆ. ಈ ಕುರಿತು ಈಗಾಗಲೇ ಕೇಂದ್ರ ಸರಕಾರಕ್ಕೆ ಮನವಿತ್ರ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಸೋಯಾಬಿನ್, ಹತ್ತಿ, ಸೂರ್ಯಕಾಂತಿ, ಕ್ಯಾರೇಟ್, ಗೋವಿನಜೋಳ, ಕಬ್ಬು, ಟೊಮ್ಯಾಟೋ, ಬಟಾಣಿ ಸೇರಿದಂತೆ ವಿವಿಧ ಬಗೆಯ ಬೆಳೆಗಳು ಹಾನಿಯಾಗಿರುತ್ತವೆ ಎಂದು ತಿಳಿಸಿದರು.

ಜಿಲ್ಲೆಯ ಎಲ್ಲ ಹದಿನೈದು ತಾಲ್ಲೂಕುಗಳಲ್ಲಿ ಬಿತ್ತನೆ ಸಂದರ್ಭದಲ್ಲಿ ಮೂರು ವಾರಕ್ಕಿಂತ ಹೆಚ್ಚು ಅವಧಿಯವರೆಗೆ ಮಳೆಯಾಗಿರಲಿಲ್ಲ. ಆದ್ದರಿಂದ ಬರ‌ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯ ಹದಿನೈದು ತಾಲ್ಲೂಕುಗಳ ಪೈಕಿ ಬೆಳಗಾವಿ ಮತ್ತು ಖಾನಾಪುರ ಹೊರತುಪಡಿಸಿ 13 ತಾಲ್ಲೂಕುಗಳನ್ನು ಬರಪೀಡಿತ ಎಂದು ಸರಕಾರ ಘೋಷಿಸಿದ್ದು, ಜಿಲ್ಲೆಯ ಸಂಪೂರ್ಣ ಬರದ ಪರಿಸ್ಥಿತಿಯನ್ನು ಕೇಂದ್ರಕ್ಕೆ ಮನವರಿಕೆ ಮಾಡಲಾಗಿದೆ.

ನಿತೇಶ ಪಾಟೀಲ್
ಜಿಲ್ಲಾಧಿಕಾರಿ ಬೆಳಗಾವಿ

Advertisement

Leave a reply

Your email address will not be published. Required fields are marked *

error: Content is protected !!