ವಿದ್ಯುತ್ ಸ್ಪರ್ಶಿಸಿ ತಂದೆ ಮಗ ಸಾವು ; ಹೆಸ್ಕಾಂ ನಿರ್ಲಕ್ಷಕ್ಕೆ ಕುಟುಂಬ ಸರ್ವನಾಶ
ಬೈಲಹೊಂಗಲ : ಮನೆಯ ಮುಂದೆ ಇದ್ದ ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ, ಮಗ ಇಬ್ಬರೂ ಮೃತಪಟ್ಟ ಘಟನೆ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ನಡೆದಿದೆ.
ಹೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯದ ಕಾರ್ಯಕ್ಕೆ ಉಡಿಕೇರಿ ಗ್ರಾಮದ ಇಂದ್ರಾನಗರದ ನಿವಾಸಿ ಪ್ರಭಾಕರ ಹುಂಬಿ (75), ಮಂಜುನಾಥ ಹುಂಬಿ (32) ಮೃತಪಟ್ಟಟ್ಟಿದ್ದಾರೆ.
ಶುಕ್ರವಾರ ಬೆಳಗ್ಗೆ ಪ್ರಭಾಕರ ಹುಂಬಿ ಮನೆ ಮುಂದಿರುವ ಕಸ ಸ್ವಚ್ಛ ಮಾಡುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಕೆಳಗೆ ಬಿದ್ದಿದ್ದಾರೆ. ಇದನ್ನು ಗಮನಿಸಿದ ಮಗ ಮಂಜುನಾಥ ತಂದೆಯನ್ನು ಉಳಿಸಲು ಪ್ರಯತ್ನಿಸಿದಾಗ
ಆತನಿಗೂ ವಿದ್ಯುತ್ ತಗುಲಿದೆ. ಬೆಳವಡಿ ಸರಕಾರಿ ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ.
ಹೆಸ್ಕಾಂ ಸಿಬ್ಬಂದಿಗಳ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ದೊಡವಾಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.


