ಬೆಳಗಾವಿ : ಸಾಮಾನ್ಯ ಜನರ ಆರ್ಥಿಕ ಪ್ರಗತಿಗೆ ಬೀರೇಶ್ವರ ಸಂಸ್ಥೆಯ ಕೊಡುಗೆ ಅಪಾರವಾಗಿದೆ. ಈ ಭಾಗದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದು ಸ್ವಾವಲಂಬಿ ಭಾರತ ಕಟ್ಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅಭಿಪ್ರಾಯಪಟ್ಟರು.
ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಶನಿವಾರ ನಡೆದ ಶ್ರೀ ಬೀರೇಶ್ವರ ಕೋ-ಆಪರೇಟಿವ್ ಸೊಸೈಟಿಯ ನೂತನ ಆಡಳಿತಾತ್ಮಕ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೇಂದ್ರ ಸಹಕಾರ ರಾಜ್ಯ ಸಚಿವ ಮುರಳಿಧರ ಮೊಹೊಳ ಮಾತನಾಡಿ. ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಸಹಕಾರ ಕ್ಷೇತ್ರ ಮಹತ್ವದ ಪಾತ್ರ ವಹಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರತ್ಯೇಕ ಸಹಕಾರ ಸಚಿವಾಲಯ ರಚಿಸಿದ ಬಳಿಕ ಕ್ಷೇತ್ರಕ್ಕೆ ಹೊಸ ವೇಗ ಹಾಗೂ ಉತ್ತೇಜನ ದೊರೆತಿದೆ ಎಂದು ಹೇಳಿದರು.
ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ಅವರ ನೇತೃತ್ವದಲ್ಲಿ ಬೀರೇಶ್ವರ ಸಂಸ್ಥೆಯು ಗ್ರಾಮೀಣ ಜನರ ಆರ್ಥಿಕ ಸಬಲೀಕರಣಕ್ಕೆ ಶ್ಲಾಘನೀಯ ಸೇವೆ ಸಲ್ಲಿಸುತ್ತಿದೆ. ಸಣ್ಣ ಮಟ್ಟದಲ್ಲಿ ಆರಂಭಗೊಂಡ ಸಂಸ್ಥೆಯೊಂದು ಹಂತ ಹಂತವಾಗಿ ಬೆಳೆದು ಗ್ರಾಮೀಣ ಭಾಗದ ಜನರಿಗೆ ಆರ್ಥಿಕ ಆಸರೆಯಾಗಿರುವುದು ಸಹಕಾರ ಕ್ಷೇತ್ರದ ಶಕ್ತಿಗೆ ಸಾಕ್ಷಿಯಾಗಿದೆ ಎಂದರು.
ಸಾಮಾನ್ಯ ಜನರ ಆರ್ಥಿಕ ಪ್ರಗತಿಗೆ ಬೀರೇಶ್ವರ ಸಂಸ್ಥೆ ದೊಡ್ಡ ಮಟ್ಟದಲ್ಲಿ ಸಹಕಾರ ನೀಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ರೈತರು ಹಾಗೂ ಬಡ ವರ್ಗದ ಜನರಿಗೆ ಅಗತ್ಯ ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಆರ್ಥಿಕ ನೆರವು ನೀಡುವ ಮೂಲಕ ಬೀರೇಶ್ವರ ಸಂಸ್ಥೆ ಅವರ ನೆರವಿಗೆ ನಿಂತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಹೇಳಿದರು.
ಸಹಕಾರ ರಂಗದಲ್ಲಿ ಅಣ್ಣಾಸಾಹೇಬ ಜೊಲ್ಲೆ ಅಪಾರ ಜ್ಞಾನ ಹಾಗೂ ಸುದೀರ್ಘ ಅನುಭವ ಹೊಂದಿರುವ ನಾಯಕರು ಎಂದು ಕನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.
ಬೀರೇಶ್ವರ ಸಂಸ್ಥೆಯ ಬೆಳವಣಿಗೆಯನ್ನು ಸ್ಮರಿಸಿದ ಶಾಸಕಿ ಶಶಿಕಲಾ ಜೊಲ್ಲೆ, ಆರಂಭದಲ್ಲಿ ಸಣ್ಣ ಮಟ್ಟದಲ್ಲಿ ಸ್ಥಾಪನೆಯಾದ ಸಂಸ್ಥೆ ಇಂದು ಹಂತ ಹಂತವಾಗಿ ಬೆಳೆದು ಹೆಮ್ಮರವಾಗಿದ್ದು, ಲಕ್ಷಾಂತರ ಜನರಿಗೆ ಆರ್ಥಿಕ ಆಸರೆಯಾಗಿದೆ ಎಂದರು.
ನಿಡಸೋಸಿಯ ಶ್ರೀ ಪಂಚಮಶಿವಲಿಂಗೇಶ್ವರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಸಂಸ್ಥೆಯ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ, ಸಮರಜಿತ್ ಘಾಟಗೆ, ಶಾಸಕ ದುರ್ಯೋಧನ ಐಹೊಳೆ, ಪಿ. ರಾಜೀವ್, ಶ್ರೀಮಂತ ಪಾಟೀಲ, ಅರವಿಂದ ದೇಶಪಾಂಡೆ, ಸಂಜಯ ಪಾಟೀಲ, ಅನಿಲ್ ಬೆನಕೆ, ಚಂದಗಡ ಶಾಸಕ ಶಿವಾಜಿ ಪಾಟೀಲ, ಅಪ್ಪಾಸಾಹೇಬ ಜೊಲ್ಲೆ, ಜಯಕುಮಾರ ಖೋತ್, ರಾಜೇಂದ್ರ ಪಾಟೀಲ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.ಸಂಸ್ಥೆಯ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ವಂದಿಸಿದರು.





