ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟಿ ಪವಿತ್ರಾ ಗೌಡ (Pavithra Gowda) ಅವರ ಮೊದಲ ಪತಿ ಸಂಜಯ್ ಸಿಂಗ್ (Sanjay Singh) ರಾಜಸ್ಥಾನದಲ್ಲಿ ನಿಧನರಾಗಿದ್ದಾರೆ. ಸುಮಾರು 7 ರಿಂದ 8 ತಿಂಗಳ ಹಿಂದೆಯೇ ಅವರು ಕೊನೆಯುಸಿರೆಳೆದಿದ್ದು, ಈ ವಿಚಾರ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ದೀರ್ಘಕಾಲದ ಅನಾರೋಗ್ಯ : ರಾಜಸ್ಥಾನದಲ್ಲಿ ಕೊನೆಯುಸಿರು – ಕಳೆದ ಹಲವು ವರ್ಷಗಳಿಂದ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಸಂಜಯ್ ಸಿಂಗ್ ರಾಜಸ್ಥಾನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಪವಿತ್ರಾ ಗೌಡ ಅವರಿಂದ ವಿಚ್ಛೇದನ ಪಡೆದ ನಂತರ ತೀವ್ರ ಮಾನಸಿಕ ವೇದನೆಗೆ ಒಳಗಾಗಿದ್ದ ಅವರು, ಮದ್ಯಪಾನಕ್ಕೆ ತುತ್ತಾಗಿದ್ದರು ಎಂದು ಹೇಳಲಾಗಿದ್ದು, ಇದೇ ಅವರ ಆರೋಗ್ಯ ಸ್ಥಿತಿಗೆ ಮುಖ್ಯ ಕಾರಣ ಎನ್ನಲಾಗಿದೆ.
ರೇಣುಕಾಸ್ವಾಮಿ ಹತ್ಯೆ ಆರೋಪದ ಮೇಲೆ ಪವಿತ್ರಾ ಗೌಡ ಬಂಧನಕ್ಕೊಳಗಾದ ಸಮಯದಲ್ಲಿ ಸಂಜಯ್ ಸಿಂಗ್ ಅವರು ರಾಜಸ್ಥಾನದಿಂದ ಬೆಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಮುಂದೆ ಬಂದಿದ್ದ ಅವರು, ಪವಿತ್ರಾ ಅವರೊಂದಿಗಿನ ತಮ್ಮ ಹಳೆಯ ದಿನಗಳು ಹಾಗೂ ವೈವಾಹಿಕ ಜೀವನದ ಕುರಿತು ಮುಕ್ತವಾಗಿ ಮಾತನಾಡಿದ್ದರು.
ಮಾಧ್ಯಮಗಳಿಗೆ ಸಂದರ್ಶನ ನೀಡಿ ಸ್ವಗಾಮಕ್ಕೆ ಮರಳಿದ ಕೆಲವೇ ತಿಂಗಳುಗಳಲ್ಲಿ ಅವರು ವಿಧಿವಶರಾಗಿದ್ದಾರೆ.
2011ರಲ್ಲೇ ಮುರಿದುಬಿದ್ದ ದಾಂಪತ್ಯ 2007-08 ರ ಅವಧಿಯಲ್ಲಿ ಪ್ರೀತಿಸಿ ಮದುವೆಯಾಗಿದ್ದ ಸಂಜಯ್ ಸಿಂಗ್ ಹಾಗೂ ಪವಿತ್ರಾ ಗೌಡ ದಂಪತಿಗೆ ಓರ್ವ ಹೆಣ್ಣು ಮಗುವಿದ್ದಾಳೆ. ಆದರೆ ದಾಂಪತ್ಯದಲ್ಲಿ ಮೂಡಿದ ಮನಸ್ತಾಪಗಳಿಂದಾಗಿ ಈ ಜೋಡಿ 2011ರಲ್ಲೇ ಕಾನೂನಾತ್ಮಕವಾಗಿ ವಿಚ್ಛೇದನ ಪಡೆದರು. ಡಿವೋರ್ಸ್ ನಂತರ ಸಂಜಯ್ ಅವರೊಂದಿಗೆ ಸಂಪರ್ಕ ಕಡಿದುಕೊಂಡಿದ್ದ ಪವಿತ್ರಾ, ಪ್ರಸಕ್ತ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.



