ವಿದ್ಯಾರ್ಥಿನಿಗೆ ಶಾಲೆಯಲ್ಲಿ ಅಡ್ಮಿಷನ್ ನೀಡಲು ಪೋಷಕರಿಂದ ಲಂಚ ಸ್ವೀಕರಿಸುತ್ತಿದ್ದ ವಸತಿ ಶಾಲೆಯ ಪ್ರಿನ್ಸಿಪಲ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ.
ಹುಣಸೇಕಟ್ಟೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ (Kittur Rani Channamma Residential School) ಪ್ರಿನ್ಸಿಪಾಲ್ ನಾಗದೇವ ಬಂಧಿತ ಆರೋಪಿಯಾಗಿದ್ದಾರೆ. ಬಾಲಕಿಯೊಬ್ಬಳನ್ನು 7ನೇ ತರಗತಿಗೆ ಈ ವಸತಿ ಶಾಲೆಗೆ ಸೇರಿಸಲು ಪೋಷಕರು ಮುಂದಾಗಿದ್ದರು. ಆದರೆ, ಅಡ್ಮಿಷನ್ ಮಾಡಿಕೊಡಲು ಪ್ರಿನ್ಸಿಪಾಲ್ ನಾಗದೇವ ಅವರು ₹20,000 ಹಣ ನೀಡುವಂತೆ ಪೋಷಕರಿಗೆ ಒತ್ತಾಯಿಸಿದ್ದರು. ಶಾಲೆಗೆ ‘ಡ್ರೆಸ್ ಸೆಟ್’ ಖರೀದಿಸಬೇಕಿದೆ ಎಂದು ನೆಪವೊಡ್ಡಿ ಅವರು ಈ ಲಂಚದ ಬೇಡಿಕೆ ಇಟ್ಟಿದ್ದರು.
ಪ್ರಿನ್ಸಿಪಾಲ್ನಿಂದ ಬೇಸತ್ತ ಬಾಲಕಿಯ ಪೋಷಕರು ಈ ಕುರಿತು ಶಿವಮೊಗ್ಗ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. ಜುಲೈ 20ರ ಸೋಮವಾರದಂದು ನಿಗದಿಪಡಿಸಿದಂತೆ ₹10,000 ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಜುಲೈ 20ರ ಸೋಮವಾರದಂದು ನಿಗದಿಪಡಿಸಿದಂತೆ ಮೊದಲು ಕಂತಿನ ರೂಪದಲ್ಲಿ ₹10,000 ಲಂಚದ ಹಣವನ್ನು ಪೋಷಕರಿಂದ ಪ್ರಿನ್ಸಿಪಾಲ್ ಸ್ವೀಕರಿಸಿದ್ದರು. ಈ ವೇಳೆ ಹೊಂಚು ಹಾಕಿದ್ದ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಹಣದ ಸಮೇತ ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಲೋಕಾಯುಕ್ತ ಡಿವಿಎಸ್ಪಿ ಬಿ.ಸಿ.ಚಂದ್ರಶೇಖರ್, ಇನ್ಸ್ಪೆಕ್ಟರ್ ರುದ್ರೇಶ್ ನೇತೃತ್ವದ ತಂಡದಿಂದ ದಾಳಿ ನಡೆಸಲಾಗಿದೆ.
ಆರೋಪಿ ಪ್ರಿನ್ಸಿಪಾಲ್ ನಾಗದೇವ ವಿರುದ್ಧ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಅಧಿಕಾರಿಗಳು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.



