Select Page

ಬೆಳಗಾವಿಗೆ ಎಷ್ಟು ಸಚಿವಸ್ಥಾನ..? ಮಂತ್ರಿ ಪದವಿ ಮೇಲೆ ಕಣ್ಣಿಟ್ಟ ಶಾಸಕರು..!

ಬೆಳಗಾವಿಗೆ ಎಷ್ಟು ಸಚಿವಸ್ಥಾನ..? ಮಂತ್ರಿ ಪದವಿ ಮೇಲೆ ಕಣ್ಣಿಟ್ಟ ಶಾಸಕರು..!

ಬೆಳಗಾವಿ : ಸಿಎಂ ಸಿದ್ದರಾಮಯ್ಯ ರಾಜೀನಾಮೆ ನಂತರ ಹೊಸ ಮುಖ್ಯಮಂತ್ರಿ ಆಯ್ಕೆ ಒಂದುಕಡೆಯಾದರೆ ಸಂಪುಟ ಸೇರ್ಪಡೆ ಚರ್ಚೆ ಮತ್ತೊಂದೆಡೆಯಾಗಿದೆ. ಈ ಮಧ್ಯ ನೂತನ ಸಿಎಂ ಸಂಪುಟ ಸೇರಲು ಬೆಳಗಾವಿಯ ಕೆಲ ಶಾಸಕರು ಓಡಾಟ ನಡೆಸಿದ್ದಾರೆ.

ಮೂರು ಬಾರಿ ಶಾಸಕರಾದ ಬೈಲಹೊಂಗಲ ಕ್ಷೇತ್ರದ ಶಾಸಕ ಮಹಾಂತೇಶ್ ಕೌಜಲಗಿ, ಸಿದ್ದರಾಮಯ್ಯನವರ ಆಪ್ತ ಬಳಗದಲ್ಲಿ ಗರುತಿಸಿಕೊಂಡ ರಾಮದುರ್ಗ ಶಾಸಕ ಅಶೋಕ್ ಪಟ್ಟಣ ಶತಾಯ ಗತಾಯ ಮಂತ್ರಿ ಸ್ಥಾನ ಪಡೆಯಬೇಕು ಎಂಬ ಜಿದ್ದಿಗೆ ಬಿದ್ದಾರೆ. ಇನ್ನೂ ಕಾಗವಾಡ ಶಾಸಕ ರಾಜು ಕಾಗೆ ಹಾಗೂ ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ಪುತ್ರ ಗಣೇಶ್ ಹುಕ್ಕೇರಿ ಅವರೂ ಸಚಿವಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದು, ಹೈಕಮಾಂಡ್ ಯಾರಿಗೆ ಅವಕಾಶ ನೀಡುತ್ತದೆ ಕಾದು ನೋಡಬೇಕು.

ಕಳೆದ ಬಿ.ಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಆಡಳಿತಾವಧಿಯಲ್ಲಿ ಬೆಳಗಾವಿ ಜಿಲ್ಲೆಗೆ ಭರ್ಜರಿ ಅವಕಾಶ ನೀಡಲಾಗಿತ್ತು. ಐದು ಜನರಿಗೆ ಸಚಿವಸ್ಥಾನ ನೀಡಿದ್ದರೆ 15 ಕ್ಕೂ ಅಧಿಕ ನಿಗಮಮಂಡಳಿ ಸೇರಿ ವಿವಿಧ ಸಾಂವಿಧಾನಿಕ ಹುದ್ದೆಗಳಲ್ಲಿ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಲಾಗಿತ್ತು. ಇದೇ ರೀತಿಯಲ್ಲಿ ರಾಜಕೀಯವಾಗಿ ದೊಡ್ಡ ಜಿಲ್ಲೆಯಾದ ಬೆಳಗಾವಿಗೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿಯೂ ಹೆಚ್ಚಿನ ಪ್ರಾಶಸ್ತ್ಯ ನೀಡುವಂತೆ ಜಿಲ್ಲೆಯ ನಾಯಕರು ಆಗ್ರಹಿಸುತ್ತಿದ್ದಾರೆ.‌

2023 ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಹೈಕಮಾಂಡ್ ಟಿಕೆಟ್ ನಿರಾಕರಣೆ ಮಾಡಿದ್ದಕ್ಕೆ‌ ಮುನಿಸಿಕೊಂಡು ಕಾಂಗ್ರೆಸ್ ಸೇರಿದ್ದ ಲಕ್ಷ್ಮಣ ಸವದಿ ದಾಖಲೆ‌ ಮತಗಳ‌ ಅಂತರದ ಗೆಲುವಿನ ಜೊತೆ ಉತ್ತರ ಕರ್ನಾಟಕ ಭಾಗದ ಕೆಲ ಕ್ಷೇತ್ರಗಳಲ್ಲಿ ಪ್ರಭಾವ ಬೀರಿದ್ದರು. ಸಿದ್ದರಾಮಯ್ಯ ಸರಕಾರದಲ್ಲಿ ಮಂತ್ರಿ ಸ್ಥಾನ ನಿಶ್ಚಿತ ಎಂದು ಹೇಳುತ್ತಿದ್ದಾಗಲೇ ಸವದಿಗೆ ನಿರಾಸೆಯಾಗಿತ್ತು. ಸಧ್ಯ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಸಚಿವಸ್ಥಾನ‌ ನಿಶ್ಚಿತ ಎಂದು‌ ಕಾಂಗ್ರೆಸ್ ವಲಯದಲ್ಲಿ ‌ಕೇಳಿಬರುತ್ತಿದ್ದರೂ ಇದಕ್ಕೆ ಸಚಿವ ಸತೀಶ್ ಜಾರಕಿಹೊಳಿ ಹೇಗೆ ಸ್ಪಂದಿಸುತ್ತಾರೆ ಎಂಬುದು ಅಷ್ಟೇ ಮುಖ್ಯ.

ಹೊಸಬರಲ್ಲಿ ಮೂಡಿದ ಭರವಸೆ : ಮೊದಲಬಾರಿಗೆ ಆಯ್ಕೆಯಾದ ಶಾಸಕರಿಗೆ ಸಚಿವಸ್ಥಾನದ ಅವಕಾಶ ನೀಡುವಂತೆ ಸುಮಾರು 31 ಕ್ಕೂ ಅಧಿಕ ಕಾಂಗ್ರೆಸ್ ಶಾಸಕರು ಹೈಕಮಾಂಡ್ ನಾಯಕರಿಗೆ ಪತ್ರ ಬರೆದ ಬೆನ್ನಲ್ಲೇ ಬೆಳಗಾವಿ ಜಿಲ್ಲೆಯ ಮೊದಲಬಾರಿಗೆ ಆಯ್ಕೆಯಾದ ಶಾಸಕರ ಮೊಗದಲ್ಲಿ ಬರವಸೆಯ ನಗೆ ಮೂಡಿದೆ. ಸವದತ್ತಿ ಶಾಸಕ ವಿಶ್ವಾಸ್ ವೈದ್ಯ, ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ, ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್, ಚೆನ್ನಮ್ಮನ ಕಿತ್ತೂರು ಕ್ಷೇತ್ರದ ಶಾಸಕ ಬಾಬಾಸಾಹೇಬ್ ಪಾಟೀಲ್ ಸಚಿವಸ್ಥಾನದ ನಿರೀಕ್ಷೆಯಲ್ಲಿದ್ದಾರೆ.

ಲಕ್ಷ್ಮೀ ಹೆಬ್ಬಾಳಕರ್ & ಸತೀಶ್ ಜಾರಕಿಹೊಳಿಗೆ ಯಾವ ಹುದ್ದೆ : ಸಿದ್ದರಾಮಯ್ಯ ಸಂಪುಟದಲ್ಲಿ ಏಕೈಕ ಮಹಿಳಾ ಸಚಿವೆಯಾದ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಮುಂದಿನ ಅವಧಿಗೆ ಸಚಿವರನ್ನಾಗಿ ಮುಂದುವರಿಸುವ ಸಾಧ್ಯತೆ ಹೆಚ್ಚಿದೆ. ಪಕ್ಷ ಸಂಘಟನೆ ಹಾಗೂ ಮಹಿಳಾ ಶಕ್ತಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆ ಹೆಬ್ಬಾಳಕರ್ ಅವರನ್ನು ಮುಂದುವರೆಸುವ ಇಚ್ಛಾಶಕ್ತಿ ಇದ್ದಂತೆ ಕಾಣುತ್ತಿದೆ.

ಇನ್ನೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಕೆಪಿಸಿಸಿ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಇದ್ದು ಇವರು ಸಚಿವ ಸ್ಥಾಮದಿಂದ ದೂರ ಉಳಿಯುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.








Advertisement

Leave a reply

Your email address will not be published. Required fields are marked *

error: Content is protected !!