ಚಿಂಗಳೆಗೆ ಏ ಬಾಡ್ಯಾ ಎಂದ ಮಹಿಳೆಯರು ; ಜೊಲ್ಲೆ ಆಕ್ರೋಶ – ಪೊಲೀಸ್ ಭದ್ರತೆಯಲ್ಲಿ ಹೊರನಡೆದ ಬುಡಾ ಅಧ್ಯಕ್ಷರು
ಬೆಳಗಾವಿ : ಪ್ರಧಾನಮಂತ್ರಿ ಘರಾಕುಲ ಯೋಜನೆಯಡಿ ಪಟ್ಟಣಕುಡಿ ವ್ಯಾಪ್ತಿಯ ದಾಯಿಂಗಡೆ ಮಳಾದಲ್ಲಿ ನಿರ್ಮಿಸಿರುವ ಜಿ ಪ್ಲಸ್ ಟು ಮನೆಗಳ ಹಂಚಿಕೆಗಾಗಿ ಬುಧವಾರ ನಡೆದ ಆಶ್ರಯ ಯೋಜನಾ ಸಮಿತಿ ಸಭೆಯಲ್ಲಿ ಭಾರಿ ಗದ್ದಲ ಉಂಟಾಗಿ ಕೊನೆಗೆ ಸಭೆಯನ್ನು ರದ್ದುಪಡಿಸಲಾಯಿತು.
ಸಭೆಯಲ್ಲಿ ಶಾಸಕಿಯಾದ ಶಶಿಕಲಾ ಜೊಲ್ಲೆ ಅವರು ಮೊದಲ ನಾಲ್ಕು ಹಂತದ ಹಣ ಪಾವತಿಸಿದ 600 ಫಲಾನುಭವಿಗಳಿಗೆ ಲಾಟರಿ ಮೂಲಕ ಮನೆ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು. ಇದಕ್ಕೆ ಬುಡಾ ಅಧ್ಯಕ್ಷ ಲಕ್ಷ್ಮಣ ಚಿಂಗಳೆ ವಿರೋಧ ವ್ಯಕ್ತಪಡಿಸಿ, 948 ಫಲಾನುಭವಿಗಳು ಹಣ ಪಾವತಿಸಿರುವುದರಿಂದ ಎಲ್ಲರಿಗೂ ಲಾಟರಿ ನಡೆಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಯಾಗಿ ಶಾಸಕಿಯವರು 800 ಮನೆಗಳು ಸಿದ್ಧವಾಗಿರುವುದರಿಂದ 800 ಮಂದಿಗೆ ಮನೆ ಹಂಚಿಕೆ ಮಾಡಲು ಸಿದ್ಧವಿರುವುದಾಗಿ ತಿಳಿಸಿದರು. ಆದರೆ ಇದಕ್ಕೂ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ, ಪರಸ್ಪರ ವಿರುದ್ಧ ಘೋಷಣೆ ಮತ್ತು ಗದ್ದಲ ಉಂಟಾಯಿತು.
ಈ ವೇಳೆ ಲಕ್ಷ್ಮಣರಾವ್ ಚಿಂಗಳೆ ವಿರುದ್ಧ ನೆರೆದಿದ್ದ ಮಹಿಳೆಯರು ಆಕ್ರೋಶ ಹೊರಹಾಕಿದರು. ಏ ಬಾಡ್ಯಾ ಎಂದು ಸಿಟ್ಟಿನಿಂದ ಬೈದ ಘಟನೆಯೂ ನಡೆಯಿತು. ಇನ್ನು ಕೆಲಕಾಲ ಅಣ್ಣಾಸಾಹೇಬ್ ಜೊಲ್ಲೆ ಹಾಗೂ ಚಿಂಗಳೆ ನಡುವೆ ವಾಗ್ವಾದವೂ ನಡೆಯಿತು.

