ಬೆಳಗಾವಿ : ಕ್ಷುಲ್ಲಕ ಕಾರಣಕ್ಕೆ ಕುರಿ ಮೇಯಿಸಲು ಹೋಗಿದ್ದ ಸಹೋದರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಆರೋಪದಲ್ಲಿ ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಯಮಕನಮರಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಕ್ಕೇರಿ ತಾಲೂಕಿನ ಹಟ್ಟಿಆಲೂರು ಗ್ರಾಮದ ಬಸವರಾಜ ಕಮತಿ ( 24 ) ಬಂಧಿತ ಆರೋಪಿ. ಕಳೆದ ಮೇ. 8 ರಂದು ಹುಕ್ಕೇರಿ ತಾಲೂಕಿನ ಪಾಶ್ಚಾಪುರ ಬಳಿ ಜಮೀನಿನಲ್ಲಿ ರಾಯಪ್ಪ ಕಮತಿ ( 28 ) ಕುರಿ ಮೇಯಿಸಲು ಹೋಗಿದ್ದ. ಈ ಸಂದರ್ಭದಲ್ಲಿ ಆರೋಪಿ ಬಸವರಾಜ ಅಣ್ಣನ ಕಣ್ಣಿಗೆ ಕಾರದಪುಡಿ ಎರಚಿ ಬರ್ಬರವಾಗಿ ಹತ್ಯೆ ಮಾಡಿದ್ದ. ನಂತರ ಯಾರಿಗೂ ತಿಳಿಯದಂತೆ ಸುಮ್ಮನಿದ್ದ.
ಮೃತ ರಾಯಪ್ಪ ತಂದೆ ಸುರೇಶ್ ಕಮತಿ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಮಗ ಕಾಣೆಯಾದ ಕುರಿತು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಕುರಿತು ತನಿಖೆ ಕೈಗೊಂಡಿದ್ದ ಪೊಲೀಸರು ವಿವಿಧ ಸುಳಿವು ಆಧರಿಸಿ ಆರೋಪಿ ಬಸವರಾಜ ಕಮತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೆದ್, ಕುವೈತ್ ನ ಖಾಸಗಿ ಸಂಸ್ಥೆಯಲ್ಲಿ ಕೊಲೆ ಆರೋಪಿ ಬಸವರಾಜ ಕೆಲಸ ಮಾಡುತ್ತಿದ್ದ. ಕೆಲ ದಿನಗಳಿಂದ ಊರಿನಲ್ಲಿ ಬಂದು ವಾಸವಿದ್ದ. ಯಾವುದೇ ಕೆಲಸ ಮಾಡದ ಈತನ ಮೇಲೆ ಸಹೋದರ ರಾಯಪ್ಪ ಹಾಗೂ ದುಂಡಪ್ಪ ಸಿಟ್ಟಾಗಿದ್ದರು. ಕೆಲವು ಬಾರಿ ಜಗಳವೂ ನಡೆದಿತ್ತು.
ಮೇ. 8 ರಂದು ಕುರಿ ಮೇಯಿಸಲು ಹೋಗಿದ್ದ ರಾಯಪ್ಪ ಅಲ್ಲೇ ಮೋಬೈಲ್ ನಲ್ಲಿ ರೀಲ್ಸ್ ನೋಡುತ್ತಾ ಕುಳಿತಿದ್ದ. ಇದೇ ಸಂದರ್ಭದಲ್ಲಿ ಆತನ ಸಹೋದರ ಬಸವರಾಜ ಕಮತಿ ಕಣ್ಣಿಗೆ ಕಾರದಪುಡಿ ಎರಚಿ ಕೊಲೆ ಮಾಡಿದ್ದು. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದರು.
ಕುರಿ ಮೇಯಿಸುತ್ತಿದ್ದ ಅಣ್ಣನ ಕೊಂದ ಕಿರಾತಕ ಅಂದರ್



