ನಿಮ್ಮ ಹಣಕ್ಕೆ ನಾನು ಜವಾಬ್ದಾರಿ ; ಜನರ ಬೆನ್ನಿಗೆ ನಿಂತ ಸಾಹುಕಾರ
ಗೋಕಾಕ : ಬಾಳಾಸಾಹೇಬ ಮಾಂಗಳೇಕರ ಸೇರಿ ಇನ್ನಿತರ ಹಿರಿಯರು ಕಟ್ಟಿದ ಮಹಾಲಕ್ಷ್ಮಿ ಬ್ಯಾಂಕನ್ನು ನಾನು ಮುಚ್ಚಲು ಬಿಡುವದಿಲ್ಲ. ಠೇವಣಿದಾರರ ಹಣಕ್ಕೆ ನಾನು ಜವಾಬ್ದಾರನಿದ್ದೇನೆ. ಬ್ಯಾಂಕಿನ ಗ್ರಾಹಕರು ಆತಂಕ ಪಡುವ ಅವಶ್ಯಕತೆ ಇಲ್ಲ, ಅತಿ ಶೀಘ್ರದಲ್ಲೇ ನಿಮ್ಮ ಹಣವನ್ನು ವಾಪಸ್ಸು ಕೊಡಿಸುತ್ತೇನೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಶನಿವಾರ ಮಹಾಲಕ್ಷ್ಮಿ ಬ್ಯಾಂಕನ ಗ್ರಾಹಕರ ಸಭೆಯಲ್ಲಿ ಮಾತನಾಡಿ, ಕಳೆದ ಎರಡ್ಮೂರು ದಿನಗಳ ಹಿಂದೆ ಬ್ಯಾಂಕಿನ ಸಿಬ್ಬಂಧಿಗಳು ಅವ್ಯವಹಾರ ನಡೆಸಿರುವ ಘಟನೆ ತಿಳಿದು ಬಂದಿದೆ. ಬ್ಯಾಂಕನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಸಿಬ್ಬಂದಿ 2021 ರಿಂದ ಈ ವರೆಗೆ 6 ಕೋಟಿ 90 ಲಕ್ಷ ಹಣ
ಡಿಪಾಸಿಟ್ ಮಾಡಿ ಸುಮಾರು 65ಕೋಟಿ ರೂಪಾಯಿ ಅವ್ಯವಹಾರ ನಡೆಸಿದ್ದಾರೆ. 20ಕೋಟಿಗೂ ಹೆಚ್ಚು ಹಣ ಪಾವತಿಸಿದ್ದು ಇನ್ನು 74 ಕೋಟಿ ರೂಪಾಯಿ ಬ್ಯಾಂಕಗೆ ಪಾವತಿಸಬೇಕಿದೆ. ಈ ಕುರಿತು 14 ಜನ ಸಿಬ್ಬಂಧಿಗಳ ವಿರುದ್ಧ ಪ್ರಕರಣ ದಾಖಲಾಗಿದೆ ಎಂದರು.
ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಆರ್‌ಬಿಐ ಹಾಗೂ ಸರಕಾರದ ಮಾರ್ಗಸೂಚಿಯ ಪ್ರಕಾರ ಮೋಸ ಹೋದ ಬಡವರ ಹಣ ಮರಳಿಸುತ್ತೇನೆ. ಮಹಾಲಕ್ಷ್ಮಿ ಬ್ಯಾಂಕನಲ್ಲಿ ಹೆಚ್ಚಾಗಿ ಬಡ ಜನರು ತಮ್ಮ ಮಕ್ಕಳ
ವಿದ್ಯಾಭ್ಯಾಸಕ್ಕಾಗಿ, ಮದುಗೆ ಕಾರ್ಯ ಹೀಗೆ ಇನ್ನಿತರ ಸೌಲಬ್ಯಕ್ಕಾಗಿ ಠೇವಣ ಮಾಡಿದ್ದಾರೆ. ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಖಾತೆ ಹಾಗೂ ವ್ಯಾಪಾರಸ್ಥರ ಹಣಕ್ಕೆ ನಾನು ಜವಾಬ್ದಾರನಿದ್ದು ಎಲ್ಲ ಹಣವನ್ನು ಮರಳಿಸುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.
ಸಿಪಿಐ ಗೋಪಾಲ ರಾಠೋಡ ಮಾತನಾಡಿ ಮಹಾಲಕ್ಷ್ಮೀ ಬ್ಯಾಂಕ ಅವ್ಯವಹಾರದಲ್ಲಿ ಪಾಲ್ಗೊಂಡ ಸಿಬ್ಬಂಧಿಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವದು. ಗ್ರಾಹಕರು ಬ್ಯಾಂಕ ಮುಂದೆ ಜಮಾವಣೆಯಾಗದೆ ತಮ್ಮ ದೂರುಗಳಿದ್ದರೆ ಪೋಲಿಸ್ ಠಾಣೆಗೆ ಭೇಟಿ ನೀಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲದಾರ ಡಾ.ಮೋಹನ ಭಸ್ಮೆ ಸೇರಿದಂತೆ ಸಾವಿರಕ್ಕೂ ಹೆಚ್ಚು ಜನ ಮಹಾಲಕ್ಷ್ಮೀ ಬ್ಯಾಂಕನ ಗ್ರಾಹಕರು ಭಾಗವಹಿಸಿದ್ದರು.


